ನ್ಯೂಸ್

ಹೆಂಡತಿ ಕೊಟ್ಟ ಕಾಫಿಯಿಂದ ಕೆಟ್ಟ ವಾಸನೆ: ಸಂಶಯದಿಂದ ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್​!

ವಾಷಿಂಗ್ಟನ್​: ವಿಷ ಬೆರೆಸಿದ ಕಾಫಿಯನ್ನು ಕುಡಿಯಲು ಕೊಟ್ಟ ಪತ್ನಿಯನ್ನು ಗಂಡ ರೆಡ್​ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಯುಎಸ್​ ಏರ್​ಪೋರ್ಸ್​ ಉದ್ಯೋಗಿಯಾಗಿರುವ ಪತಿ ಜಾನ್ಸನ್​ರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಮೆಲೊಡಿ ಫೆಲಿಕ್ಯಾನೋ ಎಂಬಾಕೆಯನ್ನು ಯುಎಸ್​ ಪೊಲೀಸರು ಬಂಧಿಸಿದ್ದಾರೆ. ಪತ್ನಿ ನೀಡಿದ ಕಾಫಿಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ.

ಕಳೆದ ಮಾರ್ಚ್​ನಿಂದಲೂ ಕಾಫಿಯಲ್ಲಿ ಸ್ಲೋ ಪಾಯಿಸನ್​ ಹಾಕಲು ಪತ್ನಿ ಆರಂಭಿಸಿದ್ದಾಳೆ. ಪತ್ನಿಯ ವರ್ತನೆಯ ಮೇಲೆ ಅನುಮಾನಗೊಂಡ ಜಾನ್ಸನ್​ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ಇತ್ತೀಚೆಗೆ ನೀಡಿದ ಕಾಫಿಯಲ್ಲಿ ಅತಿ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಜಾನ್ಸನ್​, ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಾಫಿಗೆ ವಿಷ ಬೆರೆಸುತ್ತಿರುವುದು ಜಾನ್ಸನ್​ ಗಮನಕ್ಕೆ ಬಂದಿದೆ.

ಸಿಸಿಟಿಯ ದೃಶ್ಯಾವಳಿಯನ್ನು ಪೊಲೀಸರಿಗೆ ತೋರಿಸಿದ ನಂತರ ಪೊಲೀಸರು ತನಿಖೆ ನಡೆಸಿ, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಜಾನ್ಸನ್ ಅವರು ತನ್ನ ಕಾಫಿಯಲ್ಲಿ ಹೆಚ್ಚಿನ ಮಟ್ಟದ ಕ್ಲೋರಿನ್ ಅನ್ನು ಪತ್ತೆಹಚ್ಚಲು ಕೆಲ ಪರೀಕ್ಷಾ ವಿಧಾನಗಳನ್ನು ಬಳಸಿದ್ದು, ಅದನ್ನು ನ್ಯಾಯಾಲಯಕ್ಕೂ ತಿಳಿಸಿದ್ದಾರೆ. ಅಲ್ಲದೆ, ಕೆಲ ಸಾಕ್ಷಿಗಳನ್ನು ಸ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ತನ್ನ ಹೆಂಡತಿ ತನ್ನನ್ನು ಕೊಲ್ಲುವ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಳು ಎಂದು ಜಾನ್ಸನ್​, ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿದ ನಂತರ ಆಕೆಯನ್ನು ಬಂಧಿಸಲಾಗಿದೆ. ದಂಪತಿಗೆ ಒಂದು ಮಗುವಿದೆ. ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗಿದ್ದರು ಎಂದು ವರದಿಯಾಗಿದೆ. (ಏಜೆನ್ಸೀಸ್​)