ಜಿಮ್‌ನಲ್ಲಿ ವೇಟ್‌ಗಳ ವಿಚಾರಕ್ಕೆ ಜಗಳವಾಡುತ್ತಿರುವುದು ಮತ್ತು 20 ಕೆಜಿ ಪ್ಲೇಟ್‌ಗಳನ್ನು ನೆಲಕ್ಕೆ ಎಸೆಯುತ್ತಿರುವ ವ್ಯಕ್ತಿ 
ನ್ಯೂಸ್

ಜಿಮ್‌ನಲ್ಲಿ ‘ವೇಟ್’ ವಾರ್! ಕಸರತ್ತಿಗಾಗಿ ಜಗಳ, 20 ಕೆಜಿ ಪ್ಲೇಟ್‌ಗಳನ್ನು ನೆಲಕ್ಕೆ ಎಸೆದ ವ್ಯಕ್ತಿ; ವಿಡಿಯೋ ವೈರಲ್​! Gym Fight

ಜಿಮ್‌ನಲ್ಲಿ 'ವೇಟ್' ವಾರ್! ಕಸರತ್ತಿನ ವಿಚಾರಕ್ಕೆ ವ್ಯಕ್ತಿಗಳ ನಡುವೆ ಜಗಳ, 20 ಕೆಜಿ ಪ್ಲೇಟ್‌ಗಳನ್ನು ನೆಲಕ್ಕೆ ಎಸೆದ ಆಘಾತಕಾರಿ ವಿಡಿಯೋ ವೈರಲ್. ಸಂಪೂರ್ಣ ವಿವರ ಇಲ್ಲಿ ನೋಡಿ.

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಜಿಮ್​ (Gym Fight) ಗೆ ಹೋಗುವುದು ಕೇವಲ ದೇಹವನ್ನು ದಂಡಿಸಲು ಮಾತ್ರವಲ್ಲ ಶೋ ಆಫ್​ ಮಾಡುವ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಹಿಂದಿನ ಕಾಲದಲ್ಲಿ ಗರಡಿ ಮನೆಗೆ ತೆರಳುತ್ತಿದ್ದ ಕುಸ್ತಿ ಫೈಲ್ವಾನ್​ಗಳು ಶಿಸ್ತು ಹಾಗೂ ಭಕ್ತಿಯಿಂದ ಕಸರತ್ತು ಮಾಡುತ್ತಿದ್ದರು. ಆದರೆ ಈಗ ಈ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ.

ಮೇಲೆ ಹೇಳಿದೆ ಮಾತಿಗೆ ಪುಷ್ಠಿ ಎಂಬಂತೆ, ಬೆಂಗಳೂರಿನ ಇಂದಿರಾನಗರದಲ್ಲಿರುವ ಕಲ್ಟ್​ ಜಿಮ್​ವೊಂದರಲ್ಲಿ ನಡೆದಿರುವ ಘಟನೆ, ದೇಹವನ್ನು ಕಟ್ಟುಮಸ್ತಾಗಿ ಇರಿಸುವಲ್ಲಿ ಸಹಕಾರ ನೀಡುವ ಹಾಗೂ ಅವಕಾಶ ಕಲ್ಪಿಸುವ ಜಿಮ್​ ಮೇಲೆ ಗೌರವದ ಕೊರತೆ ಹಾಗೂ ಜನರಲ್ಲಿ ತಾಳ್ಮೆ ಕಡಿಮೆ ಆಗುತ್ತಿರುವುದಕ್ಕೆ ತಾಜಾ ಉದಾಹರಣೆಯಾಗಿದೆ.

ವಿಡಿಯೋನಲ್ಲೇನಿದೆ?

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಹಾಗೂ ಮಾಹಿತಿ ಪ್ರಕಾರ, ಜಿಮ್​ನಲ್ಲಿ ಒಬ್ಬರು ತೂಕಗಳನ್ನು ಎತ್ತುವ ಕಸರತ್ತನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇನ್ನೊಬ್ಬರು ಬಂದು ತಾವೀಗ ಇದೇ ಕಸರತ್ತನ್ನು ಮಾಡಬೇಕು. ನೀವು ಎದ್ದೇಳಿ ಎಂದು ಹೇಳಿದ್ದಾರೆ.

ಆಗ, ಕಸರತ್ತನ್ನು ಮಾಡುತ್ತಿದ್ದ ವ್ಯಕ್ತಿ, ಇನ್ನೊಂದೆರಡು ನಿಮಿಷ, ತಮ್ಮ ಕಸರತ್ತು ಮುಗಿಯುತ್ತದೆ. ನಂತರ ನೀವು ಮಾಡಿ ಎಂದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿ, ಲಿಫ್ಟಿಂಗ್​ ಬಾರ್​ನಲ್ಲಿದ್ದ 20 ಕೆ.ಜಿಯ ವೇಟ್​ ಪ್ಲೇಟ್​ಗಳನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿಡಿಯೋ ವೈರಲ್​!

ಈ ದೃಶ್ಯವನ್ನು ಜಿಮ್​ನಲ್ಲಿದ್ದ ಇತರರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆತನಿಗೆ ಸ್ವಲ್ಪವೂ ತಾಳ್ಮೆ ಇರಲಿಲ್ಲ. ಒಂದೇ ಸಮನೆ 20 ಕೆಜಿ ತೂಕದ ಪ್ಲೇಟ್​ಗಳನ್ನು ನೆಲಕ್ಕೆ ಬಿಸಾಕಿದ್ದಾನೆ. ಅದು ಸ್ವಲ್ಪ ಆಚೀಚೆ ಆಗಿದ್ದರೂ ಜಿಮ್​ನಲ್ಲಿದ್ದ ಇತರರಿಗೆ ಭಾರಿ ಸಂಕಷ್ಟವನ್ನು ತರಲಿತ್ತೆಂದು ಬರೆದುಕೊಂಡಿದ್ದಾರೆ.

ಆ ವ್ಯಕ್ತಿ ಇದ್ದದ್ದೇ ಹಾಗೇ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಜಿಮ್​ನ ಇತರ ಸದಸ್ಯರು, ಆ ವ್ಯಕ್ತಿ ವಿರುದ್ಧ ಮುಗಿಬಿದ್ದಿದ್ದಾರೆ. ಆ ವ್ಯಕ್ತಿ ಸ್ವಭಾವವೇ ಹಾಗೆ. ಅವನು ಮೊದಲಿಂದಲೂ ಆಕ್ರಮಣಕಾರಿಯಾಗಿಯೇ ವರ್ತಿಸುತ್ತಿದ್ದ. ತಾನು ಬಳಸುವ ಜಿಮ್​ ಪರಿಕರಗಳನ್ನು ಇತತರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಿಮ್​ ಮ್ಯಾನೇಜರ್​ ಗಮನಕ್ಕೆ ಈ ಮೊದಲೇ ತರಲಾಗಿತ್ತು. ಆದರೆ ಮ್ಯಾನೇಜರ್​ ಏನು ಕ್ರಮ ಕೈಗೊಂಡಿರಲಿಲ್ಲ. ಮೊದಲೇ ಕ್ರಮ ಕೈಗೊಂಡಿದ್ದರೆ, ಇಂದು ಈ ರೀತಿಯಾಗಿ ಅವನು ವರ್ತಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕಲ್ಟ್ ಫಿಟ್ ಕಠಿಣ ಕ್ರಮ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಲ್ಟ್.ಫಿಟ್ ಮಂಡಳಿ ತಕ್ಷಣವೇ ಆಕ್ಷನ್ ತೆಗೆದುಕೊಂಡಿದೆ. ಘಟನೆಯ ಸಂಪೂರ್ಣ ತನಿಖೆ ನಡೆಸಿ, ದುರ್ವತನೆ ತೋರಿದ ಆ ವ್ಯಕ್ತಿಯ ಜಿಮ್ ಸದಸ್ಯತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ.

ಕಂಪನಿ ಕಡೆಯಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಮ್ಮ ಜಿಮ್‌ಗೆ ಬರುವ ಪ್ರತಿಯೊಬ್ಬ ಸದಸ್ಯರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಇಂತಹ ಅಸಹ್ಯ ಹಾಗೂ ಬೇಜವಾಬ್ದಾರಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಕೂಡಲೇ ತನಿಖೆ ನಡೆಸಿ ಆ ವ್ಯಕ್ತಿಯ ಮೆಂಬರ್‌ಶಿಪ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪೊಲೀಸ್ ಎಂಟ್ರಿ

ಮಾಧ್ಯಮ ವರದಿಗಳ ಪ್ರಕಾರ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಂದಿರಾನಗರ ಪೊಲೀಸರು ಈ ಬಗ್ಗೆ ಗಮನ ಹರಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಬೆಂಗಳೂರು ಪೊಲೀಸ್ ಅಧಿಕೃತ ಎಕ್ಸ್​ ಹ್ಯಾಂಡಲ್ ಕೂಡ ಈ ಪೋಸ್ಟ್‌ಗೆ ರಿಪ್ಲೈ ಮಾಡಿ, ಘಟನೆ ನಡೆದ ನಿಖರವಾದ ಲೊಕೇಶನ್ ಹಾಗೂ ಕಾಂಟ್ಯಾಕ್ಟ್ ಡಿಟೇಲ್ಸ್ ಕಳುಹಿಸುವಂತೆ ಕೋರಿದೆ, (ಏಜೆನ್ಸೀಸ್).