ನ್ಯೂಸ್

ಈ ರಾಶಿಯವರು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡರೆ ಅಧಿಕ ಲಾಭ: ವಾರಭವಿಷ್ಯ

ಮೇಷ

ನಿಜ ಶ್ರಾವಣ ಮಾಸವು ಆರಂಭವಾಗಿದ್ದು, ಶ್ರಾವಣ ಮಾಸದಲ್ಲಿ ಸೋಮವಾರ ವ್ರತವು ಬಲು ಶ್ರೇಷ್ಠವಾಗಿದೆ. ಈ ಬಾರಿ ಶ್ರಾವಣ ಮಾಸವು 5 ಸೋಮವಾರಗಳಿಂದ ಕೂಡಿದ್ದು, ಶಿವನನ್ನು ಪ್ರಾರ್ಥಿಸಿ ಪೂಜಿಸಿದರೆ ವಿಶೇಷವಾದ ಭಾಗ್ಯಗಳನ್ನು ಕರುಣಿಸುತ್ತಾನೆ. ಧನ, ಸಂಪತ್ತು, ಆಯಸ್ಸು, ಆರೋಗ್ಯ ಎಲ್ಲವನ್ನೂ ನೀಡುತ್ತಾನೆ. ಗುರು, ರಾಹು ಮೇಷ ರಾಶಿಯಲ್ಲಿ ಇರುವುದರಿಂದ ಅಶ್ವಿನಿ ಭರಣಿ ಕೃತಿಕಾ 3 ಪಾದದವರಿಗೆ ಸೋಮವಾರ ಪೂಜೆಯ ಅಗತ್ಯವಿರುತ್ತದೆ. 16 ಸೋಮವಾರದ ಈ ವ್ರತವನ್ನು ಮಾಡಿ ನಿಮ್ಮ ಅಭಿಷ್ಟ ಸಿದ್ಧಿಸಿಕೊಳ್ಳಿ.

ವೃಷಭ

ವೃಷಭ ರಾಶಿಗೆ ಶುಕ್ರನು ಕರ್ಕಾಟಕದಲ್ಲಿದ್ದು ರವಿ, ಬುಧರು ಸಿಂಹದಲ್ಲಿ ಇರುವುದು ಹಾಗೂ ಕುಜನು ಕನ್ಯಾ ರಾಶಿಯಲ್ಲಿರುವುದರಿಂದ ಮನುಷ್ಯನ ಆಗುಹೋಗುಗಳನ್ನು ಗಮನಿಸಿ ಅವನ ಪಾಪ- ಪುಣ್ಯ ತುಲನೆ ಮಾಡಿ ದುಃಖವನ್ನು ದೂರ ಮಾಡುತ್ತಾರೆ. ವ್ಯಾಪಾರದಲ್ಲಿ ಎಚ್ಚರಿಕೆ ವಹಿಸಿ. 12ರಲ್ಲಿ ಗುರುವಿದ್ದು ನಿಮಗೇನು ನಷ್ಟವನ್ನು ನೀಡದೆ ಇದ್ದರೂ ಅಲ್ಪ ಲಾಭ ಕೊಟ್ಟರೂ ಸಾಕು ಶುಕ್ರನು ಚಂದ್ರನ ಮನೆಯಲ್ಲಿ ಕುಳಿತಿದ್ದು ಋಣ ಪರಿಹಾರಕ್ಕಾಗಿ ದೈವಬಲ ಬೇಕೇ ಬೇಕು. ಬ್ರಮರಾಂಭ ಮಲ್ಲಿಕಾರ್ಜುನನನ್ನು ಆರಾಧಿಸಿ.

ಮಿಥುನ

ಮಿಥುನ ರಾಶಿಯವರ ನಡೆ-ನುಡಿ ಚೆನ್ನಾಗಿದ್ದರೆ ಏಕಾದಶ ಗುರುವು 9ರ ಶನಿಯು ಚಿಂತಿತ ಫಲಗಳನ್ನು ಕೊಡುತ್ತಾರೆ. ನಾವು ಆಡುವ ಮಾತು ಮುತ್ತಿನಂತೆ ಇರಬೇಕು. ಮಾತು ಜಾಸ್ತಿ ಆಡಿದರೆ ಮುತ್ತು ನೆಲದಲ್ಲಿ ಬಿದ್ದು ಒಡೆದಂತೆ ನಮ್ಮ ಜೀವನವು ಆಗುತ್ತದೆ. ಸಾಧಕರಾಗಿ ಬದುಕಿ ಎರಡು ಶುಭ ಗ್ರಹಗಳ ಉತ್ತಮ ಫಲವನ್ನು ಪಡೆದುಕೊಂಡು ಸುಖವಾಗಿರಿ. ಎಂದೆಂದಿಗೂ ಮಿಥುನ ಕನ್ಯಾ ರಾಶಿಯವರು ದೈವ ಮಾರ್ಗದಲ್ಲೇ ಸಾಗಬೇಕು.

ಕಟಕ

ಶುಕ್ರನು ಕಟಕ ರಾಶಿಯಲ್ಲಿ ಇದ್ದು ಎರಡರಲ್ಲಿ ರವಿ, ಬುಧರು ಮಿತ್ರರಾಗಿ ಕುಳಿತು ಒಳ್ಳೆಯ ಫಲಗಳನ್ನು ನೀಡುತ್ತಾರೆ. ಹತ್ತರಲ್ಲಿ ಗುರುವಿರುವುದರಿಂದ ಸಮಾಧಾನ ಚಿತ್ತರಾಗಿ ಗುರುವಿನ ಮೇಲೆ ಅಪಾರವಾದ ನಂಬಿಕೆ ಇಟ್ಟು ಗುರುವನ್ನು ಪೂಜಿಸಬೇಕು. ಅಷ್ಟಮ ಶನಿಗೆ ಶನೇಶ್ಚರ ಅಷ್ಟೋತ್ತರವನ್ನು ಪಠಿಸಿ. ಅಶ್ವತ ಪ್ರದಕ್ಷಿಣೆಯನ್ನು ಹಾಕಿ. ಮನಸ್ಸು ಉಲ್ಲಾಸವಾಗಿ ನಿಮ್ಮ ಮನ ಸಂಕಲ್ಪವು ನೆರವೇರಲು ಅನುಕೂಲವಾಗುತ್ತದೆ.

ಸಿಂಹ

ಸಿಂಹ ರಾಶಿಯವರಿಗೆ ಇದು ಶುಭಕಾಲ. ರವಿ, ಬುಧರು ಮಿತ್ರರಾಗಿ ಒಂದೇ ಜಾಗದಲ್ಲಿ ಇರುವುದು ವಿಶೇಷ ಸ್ಥಾನಮಾನಗಳನ್ನು ತಂದುಕೊಡುತ್ತದೆ. ಬುಧನು ಲಾಭವನ್ನು, ಅದೃಷ್ಟವನ್ನು, ಸೂರ್ಯನು ಬೆಳಕನ್ನು, ಶರವೇಗದಲ್ಲಿ ಕೆಲಸವನ್ನು ಮಾಡಿಕೊಳ್ಳುವ ಉತ್ಸುಕತೆಯನ್ನು ತರುತ್ತಾರೆ. ಎರಡನೇ ಮನೆಯಲ್ಲಿ ಕುಜ ಇರುವುದರಿಂದ ಸುಬ್ರಹ್ಮಣ್ಯನನ್ನು ಪೂಜಿಸಿ. ಅರುಣ ಪಾರಾಯಣ, ಆದಿತ್ಯ ಹೃದಯ ಪಾರಾಯಣವನ್ನು ಮಾಡಿ. ಸೂರ್ಯ ಅಷ್ಟೋತ್ತರ ಪಠಿಸಿ. ಶರೀರಕ್ಕೆ ಯಾವ ಬಾಧೆಗಳು ಬಾರದಂತೆ ಸೂರ್ಯ ನಿಮ್ಮನ್ನು ಸಲಹುತ್ತಾನೆ.

ಕನ್ಯಾ

ಬುಧನ ಮನೆಯಲ್ಲಿ ಕುಜನೂ ಅಷ್ಟಮದಲ್ಲಿ ಗುರುವೂ ಇರುವುದು 10 ಹಲವು ಸಮಸ್ಯೆಗಳನ್ನು ತಂದೊಡುತ್ತದೆ. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಸಮಯ ಸಾಲದು. ಆರರ ಶನಿ ಸ್ವ ಕ್ಷೇತ್ರದಲ್ಲಿ ಇರುವುದರಿಂದ ವ್ಯಾಪಾರವು ನಡೆದು ದುಡ್ಡು ಬರುತ್ತದೆ. ಕೊಟ್ಟವರಿಗೆ ಬಂದ ಲಾಭದಲ್ಲಿ ದುಡ್ಡನ್ನು ಕೊಡದಿದ್ದರೆ ಆ ದುಡ್ಡು ವ್ಯರ್ಥವಾಗಿ ಹೋಗಿ, ಸುಖವು ಇರುವುದಿಲ್ಲ. ಶತ್ರುಗಳ ಬೈಗುಳವು ತಪ್ಪುವುದಿಲ್ಲ. ಹುಷಾರಾಗಿ ಹೆಜ್ಜೆ ಹಾಕಿ ನಡೆಯಿರಿ. ಹಯಗ್ರೀವಾ ಅಷ್ಟೋತ್ತರ ಪಠಿಸಿ ಸುಖವನ್ನು ಲಾಭವನ್ನು ಪಡೆದುಕೊಳ್ಳಿ.

ತುಲಾ

ರಾಶಿಯಲ್ಲಿ ಕೇತುವಿದ್ದಾನೆ. ಗಣಪತಿಯ ಪ್ರಾರ್ಥನೆ ಬೇಕು. ಅಸ್ಥಿರವಾದ ಮನಸ್ಸು, ಉದ್ವೇಗ, ಸಮುದ್ರದ ಅಲೆಯಗಳಂತೆ ನಾನಾ ವಿಧವಾದ ಯೋಚನೆಗಳು, ನಿರ್ಣಯಗಳು, ಎಲ್ಲರಲ್ಲೂ ತಪ್ಪನ್ನು ಕಾಣುವ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕಾದರೆ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ಮನಸ್ಸಿಗೆ ಶಾಂತಿ ಉಂಟಾಗಿ ನಿಮ್ಮ ವಿಚಾರಗಳಲ್ಲಿ ಜಯವನ್ನು ಲಾಭವನ್ನು ಗಳಿಸುತ್ತೀರಾ. ಅಚ್ಚರಿ ಉಂಟು ಮಾಡುವ ವಿಚಾರ ಒಂದರಲ್ಲಿ ಜಯವನ್ನು ಪಡೆಯುವಿರಿ. ನಿಮ್ಮ ಋಣ ಪರಿಹಾರಕ್ಕೆ ಹಣವು ಒದಗಿ ಬರುತ್ತದೆ. ದುರ್ಗಾಂ ಹರತಿ ದುಃಖ ಎಂಬಂತೆ ನೀವು ದುರ್ಗೆಯನ್ನು ಪ್ರಾರ್ಥಿಸಿದರೆ ದುಃಖ ದುಮ್ಮಾನಗಳು ಇರುವುದಿಲ್ಲ.

ವೃಶ್ಚಿಕ 

ಅಂಗಾರಕನು ಏಕಾದಶದಲ್ಲಿ ಕುಳಿತಿದ್ದು, ಗುರು ರಾಹು 6ರಲ್ಲಿ ಇದ್ದು, ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುತ್ತೀರಿ. ಗುರುಗಳು ತೋರುವ ಸೂಕ್ತವಾದ ಮಾರ್ಗದಲ್ಲಿ ಹೋದರೆ ಸಾಲವು ತೀರಿ ಸುಖದ ಹಾದಿ ಸಿಗುತ್ತದೆ. ದಂಡಪಾಣಿ ಸುಬ್ರಹ್ಮಣ್ಯನನ್ನು ಆರಾಧಿಸಿದರೆ ವಿಶೇಷವಾದ ಸುಖವನ್ನು ನೀಡಿ, ಋಣ ಬಾಧೆಯನ್ನು ನಿವಾರಿಸಿ ಸಂತೋಷವನ್ನು ಉಂಟು ಮಾಡುತ್ತಾನೆ.

ಧನು

9 ಗ್ರಹಗಳು ಫಲಗಳನ್ನು ಕೊಡಬೇಕೆಂಬ ನಿಯಮವಿಲ್ಲ. ಧನುರ್, ಮೀನ ರಾಶ್ಯಾಧಿಪತಿ ಗುರುವಾಗಿದ್ದು, ಗುರು ಒಬ್ಬನೇ ಸಾಕು ನಿಮ್ಮನ್ನು ರಕ್ಷಿಸಲು; ಕೀರ್ತಿ, ಲಾಭ, ಯಶಸ್ಸು, ಧೈರ್ಯವನ್ನು ತಂದುಕೊಡಲು. ನಿಮಗೆ ಏನು ಪಡೆದುಕೊಳ್ಳಬೇಕೆಂಬ ಗುರಿ ಇದ್ದರೆ ಸಾಕು ಆ ಗುರಿಯನ್ನು ಮುಟ್ಟುವುದು ಕಷ್ಟ ಸಾಧ್ಯವಲ್ಲ. ಯೋಚನೆ ಎಂಬುದೇ ಬೇಡ. ಆದರೆ, ಮನುಷ್ಯನಿಗೆ ಆಲೋಚನೆ ಇರಬೇಕು. ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡರೆ ಅಧಿಕ ಲಾಭವು ಬಂದು ಕೈಸೇರುತ್ತದೆ, ಶುಭವಾಗಲಿ. ದತ್ತಾತ್ರೇಯ ಗುರು ಚರಿತ್ರೆಯ ಪಾರಾಯಣವನ್ನು ನಿತ್ಯವೂ ಮಾಡಲೇಬೇಕು.

ಮಕರ

ವಕ್ರಗತಿಯಲ್ಲಿ ಶನಿಯು ಮಕರ ರಾಶಿಯನ್ನು ಸೇರಿದ್ದು ನಿಮ್ಮನ್ನು ಅಲ್ಲಾಡಿಸಿ ನಿಮ್ಮ ಮನಸ್ಸಿಗೆ ತಾಪ, ಬೇಸರ ತರುತ್ತಾನೆ. ಅದಕ್ಕಾಗಿ ಚಿಂತಿಸಬೇಡಿ. ಚಿಂತೆಗೂ ಚಿತೆಗೂ ಮಧ್ಯ ಬಿಂದು ಒಂದೇ ವ್ಯತ್ಯಾಸ. ದೇವರನ್ನು ಅನಂತವಾಗಿ ಪೂಜಿಸಿ. ಗುರು ಚರಿತ್ರೆಯ 43ನೇ ಅಧ್ಯಾಯದಲ್ಲಿ ಕೌಂಡಿನ್ಯ ಮಹರ್ಷಿಗೆ ರಾಜ್ಯವನ್ನು ಕೊಟ್ಟ ಅನಂತ ಪದ್ಮನಾಭನನ್ನು ಪ್ರಾರ್ಥಿಸಿ ಜೀವನ ಸರಿಪಡಿಸಿಕೊಳ್ಳಿ.

ಕುಂಭ

ಕುಂಭಕ್ಕೆ ಶನಿ ವಕ್ರಿ ಗತಿಯಲ್ಲಿ ದ್ವಾದಶದಲ್ಲಿ ಇದ್ದು, ಮೇಷದಲ್ಲಿ ರಾಹುವು ತೃತೀಯ ಭಾಗದಲ್ಲಿದ್ದಾನೆ. ಇದ್ದದ್ದನ್ನು ಚೊಕ್ಕಟವಾಗಿ ಇಟ್ಟುಕೊಟ್ಟು, ಕೊಟ್ಟದ್ದನ್ನು ತೃಪ್ತಿಯಾಗಿ ಅನುಭವಿಸುವುದು ಮನುಷ್ಯನ ಧ್ಯೇಯವಾಗಿರಬೇಕು. ಅತೃಪ್ತಿ ಇದ್ದರೆ ಎಷ್ಟು ಚಿನ್ನ, ಬೆಳ್ಳಿ, ವಜ್ರ ಎಲ್ಲವನ್ನು ಕೊಟ್ಟರೂ ಸಾಲದಾಗುತ್ತದೆ. ತೃಪ್ತಿಯಾದ ಜೀವನವನ್ನು, ಮುಖದ ಮೇಲೆ ನಗುವನ್ನು ಇಟ್ಟುಕೊಂಡು ಧೈರ್ಯದಿಂದ ಬಾಳಿ.

ಮೀನ

ಮನುಷ್ಯನು ತನ್ನ ಜೀವನವನ್ನು ಅಭಿವೃದ್ಧಿಯೆಡೆಗೆ ನೋಡಬೇಕು. ರುಚಿಶುಚಿಯಾದ ಆಹಾರವನ್ನು ತಿಂದು, ದೇಹವನ್ನು ಜೋಪಾನ ಮಾಡಬೇಕು. ದೈವ ಸಹಾಯ ಒಂದರಿಂದಲೇ ದ್ವಾದಶ ಶನಿಯಿಂದ ಬರುವ ವಿಪತ್ತು ದೂರವಾಗಲು ಸಾಧ್ಯ. ಮೀನ ರಾಶಿಯವರಿಗೆ ಗುರುವಿನ ಆಸರೆ ಇದ್ದು , ನಿಮ್ಮ ಕುಲ ಗುರುಗಳನ್ನು ಪೂಜಿಸಿ ಪ್ರಾರ್ಥಿಸಿ, ಪೌರ್ಣಮಿಯಲ್ಲಿ ಮೀನ ರಾಶಿಯವರು ಪಾರ್ವತಿ ಸಹಿತ ಸಾಂಬ ಸದಾಶಿವನನ್ನು ಪೂಜಿಸಿ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರೆ ಬೇಕಾದ್ದೆಲ್ಲ ಸಿಕ್ಕು ಅನುಕೂಲವಾಗುತ್ತದೆ.