ಮೇಷ ರಾಶಿ ಅಧಿಪತಿ ಸುಬ್ರಹ್ಮಣ್ಯ ದೇವರ ಸ್ಕಂದ ಶ್ರಷ್ಟಿಯ ವ್ರತಾಚರಣೆ ನಡೆದುಬಂದಿದ್ದು, ದೇವರಲ್ಲಿ ಹೊಸ ಶಕ್ತಿಯು ತುಂಬಿರುತ್ತದೆ. ಅದನ್ನು ಪಡೆಯುವುದು ಮಾನವನ ಕರ್ತವ್ಯವಾಗಿದೆ. ಅಂದರೆ ಸುಬ್ರಹ್ಮಣ್ಯ ಉಪಾಸನೆ, ಬ್ರಹ್ಮಚಾರಿ ಪೂಜೆ, ಬ್ರಾಹ್ಮಣ ಇಷ್ಟ ಬಂಧು, ಮಿತ್ರರೋಡೆನೆ ಪ್ರಸಾದವನ್ನು ಸ್ವೀಕರಿಸಿ. ಯಾವ ಸೋಲು ಗೆಲುವುಗಳ ಬಗ್ಗೆ ಚಿಂತಿಸಬೇಡಿ. ಲಗ್ನದಲ್ಲಿ ಗುರುವಿರುವುದರಿಂದ ಕೆಲಸಗಳು ಮಂದಗತಿಯಲ್ಲಿ ಸಾಗಿದರೂ ನಿಮ್ಮ ಯುಕ್ತಿಯನ್ನು ಉಪಯೋಗಿಸಿದರೆ ಯಾವ ಕೆಲಸವೂ ಅಸಾಧ್ಯವಲ್ಲ.
ಒತ್ತಡ ಹೆಚ್ಚಾಗಿದ್ದು, ಮೇಲಿಂದ ಮೇಲೆ ಟೀಕೆಗಳನ್ನು ಕೇಳಬೇಕಾಗುತ್ತದೆ. ತಾವು ಜಾಣ ಕಿವುಡು ನೀತಿ ಅನುಸರಿಸಿ ಮುಂದೆ ಸಾಗಿದರೆ ಬೆನ್ನ ಹಿಂದೆ ನಿಮ್ಮನ್ನು ಕಾಪಾಡಲು ಸಾಕ್ಷಾತ್ ಸರಸ್ವತಿ ಸ್ವರೂಪ ಐಶ್ವರ್ಯ ಸ್ವರೂಪಳಾದ ದುರ್ಗಾದೇವಿ ನಿಮ್ಮನ್ನು ಕಾಪಾಡುತ್ತಾಳೆ. ಪ್ರತಿನಿತ್ಯ ದತ್ತನ ಪ್ರಾರ್ಥನೆ ಇರಲಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಮೂರ್ತಿಯನ್ನು ಪೂಜಿಸಿ.
9ರಲ್ಲಿ ಶನಿ ಇದ್ದು ಏಕಾದಶದಲ್ಲಿ ಇರುವ ಗುರು ನಿಮಗೆ ಸತ್ ಫಲ ನೀಡುತ್ತಾನೆ. ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ. ಎಲ್ಲವನ್ನೂ ಅನುಸರಿಸಿ ನಡೆದಲ್ಲಿ ದೈವಬಲ ನಿಮ್ಮ ಬೆನ್ನ ಹಿಂದೆ ನಿಂತು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಏನು ಇಲ್ಲದಿದ್ದರೂ ಪರವಾಗಿಲ್ಲ ದೈವಬಲ ಒಂದಿದ್ದರೆ ಎಲ್ಲವನ್ನೂ ಜಯಿಸಬಹುದು. ಜನಾರ್ಧನನನ್ನು ಪೂಜಿಸಿ, ಜನಾರ್ಧನ ಅಷ್ಟೋತ್ತರ ಪಾರಾಯಣ ಮಾಡಿ. ಬುದ್ಧಿಯು ಚುರುಕಾಗುತ್ತದೆ.
ಆತ್ಮಶುದ್ಧಿ, ಸ್ಥಿರವಾದ ಮನಸ್ಸು ಇದ್ದ ಪಕ್ಷದಲ್ಲಿ ಕಟಕ ರಾಶಿಯವರು ನಿಶ್ಚಿಂತೆಯಿಂದ ಜೀವನವನ್ನು ಸಾಗಿಸಬಹುದು. ಕುಲ ಸಹಿತ ಉಮಾ ಮಹೇಶ್ವರನನ್ನು ಪೂಜಿಸಿ. ಶನಿ ಪ್ರದೋಷದ ಕಥೆಯನ್ನು ಪಾರಾಯಣ ಮಾಡಿದರೆ ದೇಹಕ್ಕೆ ಆಗುವ ಸಣ್ಣಪುಟ್ಟ ತೊಂದರೆಗಳು ದೂರವಾಗಿ ಸ್ಥಿರವಾದ ಆರೋಗ್ಯ ಸಿಗುತ್ತದೆ. ಈಶ್ವರ ಅಷ್ಟೋತ್ತರ ಪಠಿಸಿ. ಕಾಲಭೈರವಾಷ್ಟಕ ಪಾರಾಯಣ ಮಾಡಿರಿ.
ಶನಿಯ ವಕ್ರತೆ ಅವನನ್ನು ಕುಂಭದಿಂದ ಮಕರ ರಾಶಿಗೆ ತಂದಿದ್ದು ಸಿಂಹ ರಾಶಿಯವರಿಗೆ ಗುರು 9ರಲ್ಲಿ ಇದ್ದಾನೆ. ನೀವು ಮಾಡಿದ ಪುಣ್ಯದ ಕೆಲಸದ ಬಲಾಬಲದಿಂದಲೇ ದೇವರು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ನಿಮ್ಮನ್ನು ಜಯಶಾಲಿ ಆಗುವಂತೆ ಮಾಡುತ್ತಾನೆ. ಧನದ ಕೊರತೆ ಬರೆದಂತೆ ನಡೆಸುತ್ತಾನೆ. ಪ್ರತಿನಿತ್ಯ ರುದ್ರ ಪಾರಾಯಣ ಮಾಡಿ. ಗಿಡವು ಹಣ್ಣಿನ ಭಾರದಿಂದ ಬಗ್ಗಿ ಅಮೃತ ಸಮಾನ ಫಲ ಕೊಡುವಂತೆ ದೇವರೇ ನಿಮ್ಮ ಬೆನ್ನ ಹಿಂದೆ ನಿಂತು ನಿಮ್ಮನ್ನು ರಕ್ಷಿಸುತ್ತಾನೆ.
ಶನಿಯಿಂದ ಏನನ್ನು ಪಡೆದುಕೊಂಡಿದ್ದೀರಿ ಹಾಗೂ ಅಷ್ಟಮ ಗುರುವಿನಿಂದ ಯಾವ ರೀತಿ ಪುಣ್ಯವನ್ನು ವ್ಯಯ ಮಾಡಿಕೊಂಡಿದ್ದೀರಿ ಎಂಬುದೇ ಮಾನದಂಡ. ನಿಮ್ಮ ಪ್ರಾರ್ಥನೆಗೆ ತಕ್ಕಂತೆ ಸರ್ವೆಶ್ವರ ವರವನ್ನು ನೀಡುತ್ತಾನೆ. ಕೊಡುವಾಗ ಬೇಕಾದವರಿಗೆ ಕೊಡಬೇಕು; ಇಲ್ಲದಿರುವಾಗ ದೇವರೇ ನಿಮಗೆ ಬೇಕಾದ್ದನ್ನು ಕೊಡುತ್ತಾನೆ. ಲಕ್ಷ್ಮಿನರಸಿಂಹನನ್ನು ಪ್ರಾರ್ಥಿಸಿ. ಐದು ಮಂಗಳವಾರ ನರಸಿಂಹನನ್ನು ದರ್ಶಿಸಿ, ಪೂಜಿಸಿ. ನಿಮ್ಮ ಬಾಳಲ್ಲಿ ಬೆಳಕು ಬಂದು ಮುಂದೆ ಸಾಗಲು ದಾರಿ ಸುಗಮವಾಗುತ್ತದೆ.
ಶುಕ್ರನು ಗುರುವಿನ ಉಚ್ಚ ರಾಶಿಯಾದ ಕಟಕ ರಾಶಿಯನ್ನು ಸೇರಿದ್ದಾನೆ. ಸಪ್ತಮದಲ್ಲಿ ಗುರುವಿದ್ದು ಉಲ್ಲಾಸ ಆನಂದವನ್ನು ಕೊಡುತ್ತಾನೆ. ದೇಶ- ವಿದೇಶ ಪ್ರಯಾಣ, ಕೀರ್ತಿ- ಲಾಭ ನಿಮ್ಮ ಕೈ ಚೀಲದಲ್ಲಿ ತುಂಬಿಟ್ಟುಕೊಳ್ಳಿ. ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ನಿಮ್ಮ ಬಾಳನ್ನು ಉತ್ಕೃಷ್ಟ ಸ್ಥಾನಕ್ಕೆ ದೇವರೇ ಕೊಂಡೊಯ್ಯುತ್ತಾನೆ. ಸಮಸ್ಯೆ ಏನೇ ಇರಲಿ ನಿಮಗೆ ಹಿತವನ್ನು ಉಂಟು ಮಾಡುವವನು ಪರಮಾತ್ಮನೊಬ್ಬನೆ. ಪ್ರತಿನಿತ್ಯ ದುರ್ಗಾಷ್ಟೋತ್ತರ ಪಠಿಸಿ.
ಚಿತ್ತಕ್ಕೂ ಚಿಂತೆಗೂ ವ್ಯತ್ಯಾಸ ಉಂಟು. ಚಿತ್ತ ಶುದ್ಧವಿದ್ದರೆ ಬರುವ ದಾರಿ ಕಾಣಿಸುತ್ತದೆ. ಧನವು ನಿಮ್ಮ ಕೈಯಲ್ಲಿರುವ ಹೊತ್ತಿಗೆ ಅದನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ನಿಮ್ಮಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಸುಬ್ರಹ್ಮಣ್ಯನನ್ನು ಪ್ರತಿನಿತ್ಯ ಪೂಜಿಸಿ, ಅರ್ಚಿಸಿ. ನಿಮ್ಮ ಕೆಲಸವು ಕೈಗೂಡಿ ಇಷ್ಟಾರ್ಥಗಳು ಸಿದ್ಧಿಸುತ್ತವೆ.
ಶನಿಯು ಹಿಂದಕ್ಕೆ ಬಂದು ಮಕರ ರಾಶಿಯನ್ನು ಸೇರಿದ್ದಾನೆ. ಪಂಚಮದಲ್ಲಿ ಗುರುವಿದ್ದು, ಪಂಚ ಸಿದ್ದಿಗಳು, ಕಾರ್ಯತಂತ್ರಗಳು ನಿಮಗೆ ಬೇಕಾದ ರೀತಿಯಲ್ಲಿ ನಡೆದು ಕೀರ್ತಿ ತರುತ್ತದೆ. ತೃತೀಯ ಶನಿಗೆ ಪ್ರತಿನಿತ್ಯ ನೀವು ಗುರು ಚರಿತ್ರೆ ಪಾರಾಯಣ ಮಾಡಲೇಬೇಕು. ದೈವವನ್ನು ಪೂಜಿಸಿ ನಿಮ್ಮ ಆತ್ಮದಲ್ಲಿರಿಸಿ. ಅನಗತ್ಯ ಮಾತು ಬೇಡ. ಅನ್ಯರೊಂದಿಗೆ ಚರ್ಚೆಯು ಬೇಡ. ಪ್ರಯಾಣ ಖರ್ಚು ವೆಚ್ಚ ಇದ್ದರೂ ನಿಮಗೆ ಸಂತೋಷ ಸಿಗುತ್ತದೆ.
ವಕ್ರಗತಿಯಲ್ಲಿ ಶನಿಯು ಜನ್ಮಕ್ಕೆ ಬಂದು ಅಲ್ಲಿಗೆ ನವಗ್ರಹಗಳಲ್ಲಿ ವಿಶೇಷ ಗ್ರಹವಾದ ಶನಿಯು ಕಡೆಯ ಬಾರಿಗೆ ನಿಮ್ಮ ರಾಶಿಗೆ ಒಂದು ಮುಂದೆ ಸಾಗುತ್ತಾನೆ. ಶನಿ ದೇವರನ್ನು ಪೂಜಿಸಿ ಪ್ರಾರ್ಥಿಸಿ. ಶನಿ ದೇವರ ದೇವಸ್ಥಾನಕ್ಕೆ ಹೋಗಿ ಎಳ್ಳು ದೀಪ ಹಚ್ಚಿ ಬನ್ನಿ. ನಿಮ್ಮ ಭಕ್ತಿ, ಶ್ರದ್ಧೆ ನಿಮ್ಮನ್ನು ಸುಖವಾದ ಜೀವನದೆಡೆಗೆ ಕೊಂಡೊಯ್ಯುತ್ತದೆ.
ದ್ವಾದಶ ಶನಿಯು ತಾಪವನ್ನು ನೀಡುತ್ತಾನೆ. ಮೂರನೇ ಮನೆಯಲ್ಲಿ ಗುರುವು ತಡವಾದರೂ ಉತ್ತಮ ಫಲವನ್ನು ನೀಡುತ್ತಾನೆ. ಹಣದ ಕೊರತೆ ನೀಗಿಸಲು ವರಮಹಾಲಕ್ಷ್ಮಿ ವ್ರತಕಥೆ ಓದಿರಿ. 11 ಶುಕ್ರವಾರ ಲಕ್ಷ್ಮಿಯನ್ನು ಕಲಶದಲ್ಲಿರಿಸಿ ಪೂಜಿಸಿ, ನಿಮ್ಮ ಕಷ್ಟ ನಷ್ಟಗಳು ದೂರವಾಗುತ್ತವೆ.
ಮನುಷ್ಯನಿಗೆ ತೃಪ್ತಿಯೊಂದಿದ್ದರೆ ಕಾವೇರಿ ನೀರೇ ಸಾಕು; ಅಮೃತದ ಕ್ಷೀರಕ್ಕಾಗಿ ಹಲುಬಬೇಕಾಗಿಲ್ಲ. ದ್ವಿತೀಯದಲ್ಲಿ ಗುರುವಿದ್ದು ನಿಮ್ಮ ಮನಸ್ಸಿಗೆ ಧೈರ್ಯವನ್ನು ನೀಡುತ್ತಾನೆ. ಅಸ್ಥಿರ ಮನಸ್ಸನ್ನು ಗೆದ್ದು ನಿತ್ಯ ಕರ್ತವ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅನಂತಪದ್ಮನಾಭನ ಅಷ್ಟೋತ್ತರವನ್ನು ಪಾರಾಯಣ ಮಾಡಿ. ಕೌಂಡಿಣ್ಯ ಋಷಿಗೆ ದೊರೆತಂತೆ ಧನ ಕೀರ್ತಿ, ಯಶಸ್ಸು, ಲಾಭವು ನಿಮಗೆ ಲಭಿಸುತ್ತದೆ.