ಮೇಷ: ಜ್ಯೇಷ್ಠ ಮಾಸವು 7ನೇ ಜೂನ್ನಿಂದ ಆರಂಭವಾಗಿದೆ. ಜೂ. 12-14 ರ ಅವಧಿಯಲ್ಲಿ ರವಿ, ಬುಧ, ಶುಕ್ರ ಸ್ಥಾನ ಬದಲಾಯಿಸುತ್ತಾರೆ. ಶುಕ್ರನು ಮಿಥುನ ರಾಶಿಯಲ್ಲಿ ಬರುತ್ತಾನೆ. ಮೇಷ ರಾಶಿಗೆ ಸುಬ್ರಹ್ಮಣ್ಯ ಅಧಿಪತಿ. ಆದ್ದರಿಂದ ಈ ವಾರ ನೀವು ಇಚ್ಛಿತ ಕೆಲಸಗಳು ನಿಮ್ಮಂತೆ ನಡೆದು ಸಮಾಧಾನ ತರುತ್ತದೆ. ಶರೀರಕ್ಕೆ ಅತಿಯಾದ ಆಯಾಸ ಬೇಡ.
ವೃಷಭ: ಗುರುವೇ ವೃಷಭಕ್ಕೆ ಲಗ್ನದಲ್ಲಿ ಇರುವುದರಿಂದ ಜೂ.12ರಂದು ಬುಧನು ಶುಕ್ರನೊಂದಿಗೆ ಬಂದು ಶುಭವನ್ನು ತರುತ್ತಾನೆ. ಕೃತ್ತಿಕಾ, 4ನೇ ಪಾದ, ರೋಹಿಣಿ, ಮೃಗಶಿರ ನಕ್ಷತ್ರಗಳು ಗುರುವಿನ ಸಂಪರ್ಕದಲ್ಲಿ ಇರುವುದರಿಂದ ಗುರುವು ಮನೋಇಚ್ಛೆ ಬದಲಾಯಿಸುತ್ತಾನೆ. ವ್ಯವಹಾರಗಳಲ್ಲಿ ಬದಲಾವಣೆ ತರುತ್ತಾನೆ. ಒಳ್ಳೆಯದನ್ನು ನಿರೀಕ್ಷಿಸಬಹುದು. ಲಲಿತಾತ್ರಿಶತಿ ಪಠಿಸಿ.
ಮಿಥುನ: 12ರಲ್ಲಿ ಗುರು, ಸ್ವಕ್ಷೇತ್ರದಲ್ಲಿ ಬುಧನು ಆದಿತ್ಯನೊಂದಿಗೆ, ಶುಕ್ರನು ಬಂದು ಸೇರುತ್ತಾನೆ. ವಿಶೇಷವಾದರೂ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಧೀರ್ಘವಾಗಿ ಆಲೋಚಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ. ಶರೀರದಲ್ಲಿ ಬಾಧೆಗಳು ಬರದೆ ಆರೋಗ್ಯವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬಹುದು.
ಕಟಕ: ವಿಶೇಷವಾಗಿ ಗುರುಬಲವಿದ್ದು, ಈಶ್ವರನ ಅನುಗ್ರಹವಿರುತ್ತದೆ. ಧೈರ್ಯ, ಕೀರ್ತಿ ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ಒಂದೇ ದಿನ ಹಿಮಾಲಯವನ್ನು ಹತ್ತುತ್ತೇನೆಂಬ ಭ್ರಮೆ ಬೇಡ. ಶರೀರವು ಎಷ್ಟರ ಮಟ್ಟಿಗೆ ತಡೆದುಕೊಳ್ಳುವುದು ಅಂದಾಜಿಸಿ ಕಾರ್ಯರೂಪಿಸಿಕೊಳ್ಳಿ. ಆರೋಗ್ಯ ಕಾಯ್ದುಕೊಳ್ಳಲು ಸುಂದರಕಾಂಡ ಪಾರಾಯಣ ಮಾಡಿರಿ.
ಸಿಂಹ: ರಾಶಿಯವರಿಗೆ ಏಕಾದಶದಲ್ಲಿ ರವಿ ಬುಧರು ಬಂದು ಒಳ್ಳೆಯ ದಿನ ಆರಂಭವಾಗಲಿದೆ. ಗ್ರ್ರ ಬಲವಿಲ್ಲದಿದ್ದರೂ ಬುದ್ಧಿ ಬಲ, ಅದೃಷ್ಟದ ಬಲ, ದೈವ ಬಲ ಕೆಲಸ ಮಾಡಿ ನಿಮ್ಮನ್ನು ಪರಮಾತ್ಮನು ಸಂತೋಷವಾಗಿ ಇಟ್ಟಿರುತ್ತಾನೆ. ದೇವರನ್ನು ಮರೆತು ಏನನ್ನೂ ಸಾಧಿಸಲು ಅಸಾಧ್ಯವಾಗುತ್ತದೆ. ಕುಲದೇವರನ್ನು ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ.
ಕನ್ಯಾ: ರಾಶಿಯವರಿಗೆ ಗುರು, ಶನಿ ಬಂದಿದ್ದು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ಎಲ್ಲ ತರದ ವಿಷಯ ವಿಚಾರಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ವ್ಯವಹಾರದಲ್ಲಿ ಸಂಪತ್ತನ್ನು ಹೊಂದಲು ಕೋಲ್ಹಾಪುರದ ಮಹಾಲಕ್ಷ್ಮೀಯನ್ನು ದರ್ಶಿಸಿ ಬನ್ನಿ. ಧನದ ಮಾರ್ಗ ತೋರಿಸುತ್ತಾಳೆ.
ತುಲಾ: ರಾಶಿಯ ಅಧಿಪತಿ ಶುಕ್ರನು ಜೂ. 14ನೇ ತಾರೀಖಿನಂದು ಮಿಥುನ ರಾಶಿಗೆ ಬರುತ್ತಾನೆ. 9ನೇ ಮನೆ ಶುಕ್ರನು ಶುಭವನ್ನು, ನಿಮ್ಮ ಕೆಲಸ ಕಾರ್ಯಗಳಲ್ಲಿ ವೇಗವನ್ನು ಕೊಟ್ಟು ಕೀರ್ತಿಯನ್ನು ತರುತ್ತಾನೆ. ಪಂಚಮ ಶನಿಗೆ ಶನಿ ಪ್ರಾರ್ಥನೆಯು, ಅಷ್ಟಮ ಗುರುವಿಗೆ ಶಿವನನ್ನು, ದತ್ತನನ್ನೂ ಪೂಜಿಸಿ. ಒಳ್ಳೆಯ ಫಲಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ವೃಶ್ಚಿಕ: ಹಿಂದೆ ನಡೆದ ಘಟನೆಗಳು ತಾಪತ್ರಯಗಳು ಒಂದಕ್ಕೊಂದು ಸರಪಳಿಯಂತೆ ಸುತ್ತಿಕೊಂಡು ಅಡ್ಡಿಗಳನ್ನು, ಹಣದ ಕೊರತೆಯನ್ನು ತಂದಿರುತ್ತದೆ. ಆದರೆ ಈಗಿನ ಪಂಚಮ ಗುರುವು ಪಂಚತಂತ್ರಗಳಂತೆ ನಿಮ್ಮನ್ನು ಕೊಂಡೊಯ್ದು ಆರ್ಥಿಕವಾಗಿ ಹೊಸ ಆಯಾಮ ಕೊಟ್ಟು ಋಣ ಭಾಧೆ ನಿವಾರಿಸುವನು. ನಿಮ್ಮ ಪೂರ್ವ ಪುಣ್ಯದಿಂದ ಭಾಗ್ಯೋಧಯವಾಗುವ ಸಮಯ. ಗುರುವಾಯೂರಪ್ಪನನ್ನು ಸಂದರ್ಶಿಸಿ ಬನ್ನಿ.
ಧನುಸ್ಸು: ರಾಶಿಯವರಿಗೆ ಮೂರರ ಶನಿಯೇ ಉತ್ತಮವಾದ ಭವಿಷ್ಯವನ್ನು, ಮಾಡುವ ಕೆಲಸದಲ್ಲಿ ಹೊಸತನವನ್ನು ಹಾಗೂ ಶ್ರೇಯಸ್ಸನ್ನು ಕೊಟ್ಟೇ ಕೊಡುತ್ತಾನೆ. ಧನುರ್ ಮೀನಾಧಿಪತಿ ಗುರು ಕೆಡುಕು ಉಂಟುಮಾಡದಿದ್ದರೂ, ಕೆಲಸಗಳು ನಿಧಾನವಾಗಿ ಸಾಗುವವು. ಗುರು ರಾಶಿಯಲ್ಲಿ ಹುಟ್ಟಿದ ನೀವು ಯಾವಾಗಲೂ ಜನಕ-ಜನನಿಯರ ಆಶೀರ್ವಾದ ಪಡೆದುಕೊಂಡರೆ ಏನನ್ನೂ ಸಾಧಿಸಬಹುದು.
ಮಕರ: ಮೇ 1, 2024ರಿಂದ ಪಂಚಮದಲ್ಲಿ ಗುರುವಿದ್ದು, ನಿಮ್ಮ ಒತ್ತಡಗಳನ್ನು ಕೆಲಸಗಳಲ್ಲಿ ಆಗುವ ವಿಳಂಬವನ್ನು ತಪ್ಪಿಸಿದ್ದಾನೆ. ಗುರುಬಲ ಒಂದಿದ್ದರೆ ಜೀವನವನ್ನು ಸತ್ಸಂಕಲ್ಪದೊಂದಿಗೆ ನಡೆಸಬಹುದು. ಗುರು ಪಂಚಮದಲ್ಲಿ ಇರುವುದರಿಂದ ಉಪಕಾರವೇ ನಿಮ್ಮ ಮಹಾಮಂತ್ರವಾಗಿರಲಿ. ಈಶ್ವರನ ಆರಾಧನೆ ಇರಲಿ.
ಕುಂಭ: ಆಯಾಸದಿಂದಾಗಲಿ, ಆತುರದಿಂದಾಗಲಿ ಕೆಲಸ ಮಾಡಿಕೊಂಡು ಜಯದ ದಾರಿಯಲ್ಲಿ ಹೋಗುವುದು ಕಡಿಮೆ. ರಾಶಿಯಲ್ಲಿ ಶನಿಯಿರುವುದರಿಂದ ಅತಿಆಸೆ ದುಃಖಕ್ಕೆ ಕಾರಣವಾಗುತ್ತದೆ. ದೇವರ ಧ್ಯಾನ ಮಾಡಿರಿ. ಆರೋಗ್ಯ ಕಾಪಾಡಿಕೊಳ್ಳುವುದು ಮೊದಲ ಆದ್ಯತೆ ಆಗಿರಲಿ. ಹಣಕಾಸುಗಳನ್ನು ವ್ಯಾಪಾರದಲ್ಲಿ ಹೂಡದೆ ಎಚ್ಚರಿಕೆಯಿಂದ ಸಾಗಿರಿ. ಶನಿ ಪ್ರಾರ್ಥನೆ ಇರಲಿ. ಕರಿಎಳ್ಳು ದಾನ ಮಾಡಿ, ದಕ್ಷಿಣಾಮೂರ್ತಿ ಧ್ಯಾನಿಸಿ.
ಮೀನ: ಈ ರಾಶಿಗೆ 12 ರಲ್ಲಿ ಶನಿ ಇದ್ದು, ತೃತೀಯದಲ್ಲಿ ಗುರು ಬಂದಿದ್ದಾನೆ. ಗುರು ಶುಕ್ರನ ಮನೆಯಲ್ಲಿದ್ದರೂ ಹಾನಿಕಾರಕನಲ್ಲ. ಶನಿಯ ಸಂಪರ್ಕದಲ್ಲಿದ್ದು, ಈ ರಾಶಿಯವರಿಗೆ ಸಾಂಸಾರಿಕ ತಾಪತ್ರಯ, ನಿರಾಸಕ್ತಿ, ಆಲಸ್ಯ, ಉದ್ವಿಗ್ನ ಮನಸ್ಸು ಅವರನ್ನು ಕಟ್ಟಿ ಹಾಕುತ್ತದೆ. ಗ್ರಹಗಳು ಎಲ್ಲೇ ಇರಲಿ ಮನುಷ್ಯನು ತನ್ನ ಪ್ರಾರ್ಥನೆ ಮುಂದುವರಿಸಿ ದೈವಯತ್ನದಿಂದ ಮುನ್ನಡೆಯಬೇಕು. ಕುಲದೇವರನ್ನು, ದತ್ತದೇವರನ್ನು ಪೂಜಿಸಿ. ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ.