ನ್ಯೂಸ್

ವಾರಭವಿಷ್ಯ: ಈ ರಾಶಿಯವರಿಗೆ ರಾಜ ಯೋಗವು ಸಮೀಪ

ಮೋಹನ್​ ಶೆಟ್ಟಿ

ಮೇಷ: ಸಪ್ತಮ ಸ್ಥಾನವು ಶುದ್ಧವಾಗಿದೆ. ಏಕಾದಶದಲ್ಲಿ ಶನಿ, ದ್ವಿತೀಯ ಗುರುವಿರುವುದು ಶುಭಫಲಗಳನ್ನು ಹಾಗೂ ಶ್ರೇಯಸ್ಸನ್ನು ಕೊಡುವುದಕ್ಕೆ ಎಂದು ಭಾವಿಸಿ. ಸಾವಿರಾರು ವರ್ಷಗಳಿಂದ ಗಂಗಾ ನೀರಿನ ಸ್ನಾನವು ಪವಿತ್ರ ಎಂದು ಭಾವಿಸಿದ್ದಾರೆ. ಕುಂಭಮೇಳ ಮುಗಿಯಲು ನಾಲ್ಕು ದಿನಗಳು ಬಾಕಿ ಇದ್ದು, ಆ ನಂತರದಲ್ಲೂ ಗುರುವು ಮೇ 13ರ ವರೆಗೆ ವೃಷಭ ರಾಶಿಯಲ್ಲೇ ಇರುವುದರಿಂದ ಗಂಗಾ ಸ್ನಾನಕ್ಕೆ ವಿಶೇಷವಾದ ಫಲವೇ ಇರುತ್ತದೆ.

ವೃಷಭ: ನಾಲಗೆಯನ್ನು ಹರಿತ ಮಾಡದೆ ಇದ್ದರೆ ಬೇಕಾದ್ದನ್ನು ಪಡೆದುಕೊಳ್ಳಬಹುದು. ಧರ್ಮಶಾಸ್ತ್ರದಲ್ಲೂ ಇಂತಹ ಸಂದರ್ಭದಲ್ಲೇ ಒಳ್ಳೆಯದಾಗುತ್ತದೆ ಎಂದು ಎಲ್ಲೂ ಬರೆದಿಲ್ಲ. ಇನ್ನೇನು ರಾಜ ಯೋಗವು ನಿಮ್ಮ ಅಂಗಳವನ್ನು ತಲುಪಲಿದೆ. 11ನೇ ಮನೆಗೆ ಶನಿ, ದ್ವಿತೀಯಕ್ಕೆ ಗುರು ಬರುವ ಕಾಲ ಹತ್ತಿರದಲ್ಲಿದೆ. ಬೇಕಾದ್ದನ್ನು ಕೊಟ್ಟು ಅತ್ಯುತ್ತಮ ಸ್ಥಾನವನ್ನು ಕೊಡುತ್ತಾನೆ.

ಮಿಥುನ: 9ರ ಶನಿಯು ಅಲ್ಪಮಟ್ಟಿಗೆ ಸಹಾಯ ಮಾಡಬಲ್ಲನು. ಸದ್ಯದಲ್ಲಿ ಗುರುಬಲವಿಲ್ಲ. ಮೇ 13ರ ನಂತರ ಲಗ್ನಕ್ಕೆ ಗುರು ಬಂದರೂ ಗುರುವಿನ ಬಲ ಕಡಿಮೆ ಇರುವುದು. ನಿಮ್ಮ ಗುರುಗಳನ್ನು ಅನುಸರಿಸಿ ನಡೆದರೆ ಮನಸ್ಸನ್ನು ಯೌವನಾವಸ್ಥೆಗೆ ತಂದೇ ತರುತ್ತಾನೆ. ಗುರುಭಕ್ತಿ ಇರಲಿ ಹಾಗೂ ಮಹಾವಿಷ್ಣುವಿನ ಸ್ವರೂಪವಾದ ಜನಾರ್ದನ ಸ್ವಾಮಿಯನ್ನು ಪೂಜಿಸಿ.

ಕಟಕ: ಈ ರಾಶಿಯವರಿಗೆ ಅಧಿಪತಿ ಚಂದ್ರ. ಚಂದ್ರನು ಈಶ್ವರನ ಶಿರದ ಮೇಲೆಯೇ ನೆಲೆಸಿದ್ದಾನೆ. ನಿಮ್ಮನ್ನು ಹರಸುತ್ತಾನೆ, ಬೆಳೆಸುತ್ತಾನೆ, ಬೇಕಾದ್ದನ್ನು ಕೊಡುತ್ತಾನೆ. ಓಡಬೇಕಾಗಿಲ್ಲ, ಆಯಾಸ ಪಡಬೇಕಾದ್ದಿಲ್ಲ. ನಿಮಗೆ ಬಂದದ್ದು ನಿಮ್ಮ ಕೈ ಹಿಡಿಯುತ್ತದೆ. ಶ್ರೀರಾಮಚಂದ್ರನನ್ನು ಪೂಜಿಸಿ, ಪ್ರಾರ್ಥಿಸಿ, ಸುಂದರಕಾಂಡ ಪಾರಾಯಣ ಮಾಡಿರಿ.

ಸಿಂಹ: ಧ್ಯೇಯವಿದ್ದರೆ, ಧೈರ್ಯವಿದ್ದರೆ ಏನನ್ನೂ ಗೆಲ್ಲಬಹುದು. ಆಕಾಶವನ್ನೇ ಮುಟ್ಟಬಹುದು. ನಿಮ್ಮ ಒಳಿತಿಗಾಗಿ ದೈವವನ್ನು ನಂಬಿರಿ. ಆರೋಗ್ಯದ ಬಗ್ಗೆ ಗಮನಹರಿಸಿ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ದೈವಭಕ್ತಿಯಿಂದ ಪಾರಾಗುವಿರಿ. ವೈದ್ಯರೇ ನಾರಾಯಣ ಸ್ವರೂಪವೆಂದು ಅರಿತು, ಅವರ ಸಹಾಯದಿಂದ ಉತ್ತಮವಾದ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಕನ್ಯಾ: ದೇವರು ಪುಷ್ಪಕ ವಿಮಾನ ನೀಡಿದರೂ, ಅದನ್ನು ನಡೆಸಲು ತಂತ್ರಜ್ಞಾನ ಗೊತ್ತಿರಬೇಕು. ನೀವು ಶ್ರಮವಹಿಸಿ ಆಸಕ್ತಿಯಿಂದ ಕೆಲಸ ಮಾಡಿದರೆ, ನಿಮ್ಮನ್ನು ನೀವು ಉದ್ದರಿಸಿಕೊಳ್ಳಬಹುದು. ದ್ವಿಸ್ವಭಾವದ ರಾಶಿಯಾದ ನಿಮಗೆ ಭಗವಂತನ ಪ್ರ್ರಾರ್ಥನೆ ಮುಖ್ಯವಾಗುತ್ತದೆ. ದೊಡ್ಡಬಳ್ಳಾಪುರದ ಬಳಿ ನೆಲೆಸಿರುವ ಘಾಟಿ ಸುಬ್ರಹ್ಮಣ್ಯನನ್ನು- ನರಸಿಂಹನನ್ನು ಪೂಜಿಸಿ ಬನ್ನಿ.

ತುಲಾ: ಮಾತುಗಳನ್ನು ಆಡುವಾಗ ಭಾವನೆಯೂ ಪ್ರೀತಿಯೂ ತುಂಬಿರ ಬೇಕು. ಗ್ರಹದೋಷದ ಫಲದಿಂದ ಮಾತೇ ಮುತ್ತು ಒಡೆದಂತೆ ಆಗುವುದು. ರಾಮಾಯಣದ ಕುಂಭಕರ್ಣನೇ ಇದಕ್ಕೆ ಸಾಕ್ಷಿ. ದೇವರು ವರವನ್ನು ಕೇಳು ಎಂದಾಗ 6 ತಿಂಗಳ ಊಟ 6 ತಿಂಗಳ ಕಾಲ ನಿದ್ದೆ ಎಂದು ಕೇಳಿ ವೈಭೋಗವನ್ನೇ ಕಳೆದುಕೊಂಡನು. ಶ್ರೀರಾಮ ಜಯರಾಮ ಜಯ ಜಯ ರಾಮ ಎಂದು ರಾಮ ಮಂತ್ರವನ್ನು ಜಪಿಸಿ. ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದು.

ವೃಶ್ಚಿಕ: ಬಲಾಬಲವೇ ಮಹಾಬಲವಾಗುವುದು ಎಂಬ ಮಾತಿದೆ. ನೀವು ಅಂತಹ ಬಲವನ್ನು ಪಡೆಯಬೇಕಾದರೆ, ಶನಿಯು ಪಂಚಕಕ್ಕೂ ಬರುವುದರಿಂದ ಅವನು ಈಶ್ವರನ ಸೃಷ್ಟಿಯಾಗಿದ್ದು, ಈಶ್ವರನನ್ನು ತಪ್ಪದೇ ಪೂಜಿಸಿ, ರುದ್ರದಿಂದ ಆಭಿಷೇಕವನ್ನು ಮಾಡಿ. ನಿಮಗೆ ಒಳ್ಳೆಯ ಫಲವನ್ನೇ ನೀಡುತ್ತಾನೆ.

ಧನಸ್ಸು: ರಥವನ್ನು ನಡೆಸಲು ಚಾವಟಿಯ ಅವಶ್ಯಕತೆ ಇರುತ್ತದೆ. ಆದರೆ ರಾಮಾಯಣದ ವಾಕ್ಯಗಳಲ್ಲಿ ಯಾವ ಪಶು-ಪಕ್ಷಿ ದೇವರು ಸೃಷ್ಟಿಸಿದ ಯಾವುದೇ ಜೀವಿಗಾಗಲಿ ಯಾರಿಗೂ ನೋಯಿಸದಿದ್ದರೆ ಶ್ರೀರಾಮಚಂದ್ರನು ನಿಮ್ಮನ್ನು ಕಾಪಾಡುತ್ತಾನೆ. ಚತುರ್ಥಕ್ಕೆ ಶನಿ ಬರುತ್ತಿದ್ದಾನೆ. ನಿಮ್ಮ ಕೋಪ-ತಾಪ ಕಡಿಮೆಮಾಡಿ ಯಾರೊಂದಿಗೆ ಮಾತಾನಾಡುತ್ತಿದ್ದೀರಿ ಎಂಬ ಅರಿವಿರಲಿ. ಸಪ್ತಮಕ್ಕೆ ಗುರು ಬರಲಿದ್ದಾನೆ. ನಿಮ್ಮ ಗುರುಬಲವನ್ನು ಸಾರ್ಥಕ ಪಡಿಸಿಕೊಳ್ಳಬಹುದು.

ಮಕರ: ಈ ರಾಶಿಯವರು ಇನ್ನೂ ಎರಡು ತಿಂಗಳ ಕಾಲ ಹೆಚ್ಚಿನ ದೈವಬಲ ಸಂಪಾದಿಸಿಕೊಳ್ಳಬೇಕು. ಮನುಷ್ಯನಿಗೆ ಏಕಾಗ್ರತೆಯಿರಬೇಕು. ಅದು ಬರಲು ಮೂರ್ತಿ ಪೂಜೆಯನ್ನು ಮಾಡಿ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ನೀವು ಅದೇ ಹಾದಿಯಲ್ಲಿ ನಡೆದರೆ ಇಷ್ಟ ದೇವರ ಪೂಜೆಯನ್ನು ಮಾಡಿದರೆ, ನಿಮ್ಮ ಇಷ್ಟಗಳೇ ಕಷ್ಟಗಳನ್ನು ದೂರಮಾಡಿ ಶನಿ-ಗುರು ಸಂಚಾರದಲ್ಲಿ ಒಳ್ಳೆಯ ಫಲ ನೀಡುತ್ತದೆ. ಧನ್ವಂತರಿ ಜಪ ಮಾಡಿರಿ.

ಕುಂಭ: ಈ ರಾಶಿಯವರಿಗೆ ಶನಿ ಅಲ್ಲೇ ಇದ್ದರೂ ರವಿ-ಬುಧರು ಜತೆಗಿದ್ದಾರೆ. ಗ್ರಹಸ್ಥಿತಿ ಹೀಗಿರುವಾಗ ನೀವು ನಿಮ್ಮ ಹಿಂದಿನ ಕೆಟ್ಟ ಆಲೋಚನೆಯನ್ನು ಬಿಟ್ಟು ಈ ಕುಂಭ ಮಾಸದಲ್ಲಿ ಶಿವನನ್ನು ಪೂಜಿಸಿ, ಅದರಲ್ಲೂ ಗಂಗಾ ಮಾನಸ ಮಾರ್ತಾಂಡನನ್ನು ಪೂಜಿಸಿದರೆ, ಕಂಡೋಬನನ್ನು ಕಂಡರೆ ಕಣ್ಣಿಗೆ ಕಂಡಿದ್ದೆಲ್ಲಾ ನಿಮಗೆ ಒಳ್ಳೆಯದೇ.

ಮೀನ: ರಾಹು-ಶುಕ್ರ ಸಂಯೋಜನೆಯಲ್ಲಿದ್ದು, 12ರಲ್ಲಿ ಶನಿಯಿದ್ದಾನೆ. ದ್ವಾದಶ ಶನಿಯಿರುವುದು ಒಳ್ಳೆಯ ಪಾಠ ಹೇಳಿಕೊಡಲು, ತಿದ್ದಿ ಕೈ ಹಿಡಿದು ನಡೆಸಲು. ದೇವರೇ ಜೀವನದ ಪಾಠವನ್ನು ಕಲಿಸುತ್ತಾನೆ. ಲಗ್ನದಲ್ಲಿ ಶುಕ್ರನಿರುವುದರಿಂದ ಲಲಿತಾಪುರ ಸುಂದರಿಯನ್ನು ಪೂಜಿಸಿ, ಮೂಗೂರು ಲಲಿತಾ ಪರಮೇಶ್ವರಿಯನ್ನು ದರ್ಶಿಸಿ. ಅಲ್ಲೇ ಬನ್ನಿ ಮರಕ್ಕೆ ನಮಸ್ಕರಿಸಿ. ಕಷ್ಟಗಳು ದೂರವಾಗಿ ತಂಗಾಳಿಯ ಹಿತ-ಸುಖ ಸಿಗುತ್ತೆ.