ನ್ಯೂಸ್

ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

ತಿರುವನಂತಪುರ: ಕರೊನಾ ಸೋಂಕು ತಡೆಯ ಲಾಕ್​ಡೌನ್ ಹಲವು ವಿಶೇಷಗಳಿಗೆ, ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುವಂತೆ ಮಾಡುತ್ತಲೇ ಇದೆ. ಈಗ ಅಂಥದ್ದೇ ಒಂದು ವಿರಳ ವಿದ್ಯಮಾನ ಕೇರಳದ ರಾಜಧಾನಿ ತಿರುವನಂತಪುರದ ವಟ್ಟಿಯೂರುಕಾವು ಸಮೀಪ ನಡೆದ ಈ ಮದುವೆ!

ಆಟ್ಟುಕ್ಕಲ್​ ನಿವಾಸಿ ಶಶಿಧರನ್ ಮತ್ತು ಬಿಂದು ದಂಪತಿಯ ಪುತ್ರ ಅಖಿಲ್​, ವಟ್ಟಿಯೂರುಕಾವು ನಿವಾಸಿ ಸೋಮಶೇಖರನ್​ ಮತ್ತು ಗೀತಾ ದಂಪತಿಯ ಪುತ್ರಿ ಆತಿರಾ. ಎಲ್ಲರಂತೆ ಇವರೂ ದೊಡ್ಡ ಹಾಲ್​ನಲ್ಲೇ ಮದುವೆಯಾಗಲು ಸಿದ್ಧತೆ ನಡೆಸಿದ್ದವರು. ಆದರೆ, ಲಾಕ್​ಡೌನ್ ಕಾರಣಕ್ಕಾಗಿ ಸರಳವಾಗಿ ಮದುವೆಯಾಗಿ ಎಂಬ ನಿಯಮ ಚಾಲ್ತಿಯಲ್ಲಿದೆ. ಅದನ್ನು ಪಾಲಿಸಿಕೊಂಡೇ ಆತಿರಾ ಮತ್ತು ಅಖಿಲ್ ಸರಳವಾಗಿಯೇ ಕೊಡುಂಗನ್ನೂರು ದೇವಿ ದೇವಸ್ಥಾನದಲ್ಲಿ ಮದುವೆಯಾದರು. ಮದುವೆಯ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಮುಗಿದ ಕೂಡಲೇ ನೂತನ ವಧು-ವರರು ಜತೆಯಾಗಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.

ಮದುಮಕ್ಕಳ ವೇಷಭೂಷಣದಲ್ಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹೊಸ ಜೋಡಿಯನ್ನು ಕಂಡು ಪೊಲೀಸರು ಗಾಬರಿಯಾದ್ರು.. ಬಳಿಕ ವಿಚಾರ ತಿಳಿದು ಖುಷಿಯಾದ ಅವರು ಆ ಜೋಡಿಯನ್ನು ಬರಮಾಡಿಕೊಂಡ್ರು. ಅಲ್ಲೇ ಇದ್ದ ಹಾಲ್​ನಲ್ಲಿ ಔತಣಕೂಟಕ್ಕೆ ಬೇಕಾದ ಏರ್ಪಾಡನ್ನು ಮಾಡಿದರು. ಎಲ್ಲರೂ ಒಟ್ಟಿಗೇ ಔತಣ ಸವಿದರು. ಇದರ ಹಿನ್ನೆಲೆ ಬಗ್ಗೆ ಪ್ರತಿಕ್ರಿಯಿಸಿರುವ ಜೋಡಿ, ಲಾಕ್​ಡೌನ್ ಅವಧಿಯಲ್ಲಿ ಪೊಲೀಸರ ನಿಸ್ವಾರ್ಥ ಸೇವೆ ಕಂಡು ಅವರನ್ನು ಗೌರವಿಸಲು ಔತಣಕೂಟವನ್ನು ಪೊಲೀಸ್ ಠಾಣೆಯಲ್ಲೇ ನಡೆಸಲು ತೀರ್ಮಾನಿಸಿತ್ತು. ಪೊಲೀಸರಿಗೆ ಇವರ ಉದ್ದೇಶ ಮನವರಿಕೆಯಾದ ಕೂಡಲೇ ಎಲ್ಲವೂ ಸುಸೂತ್ರವಾಗಿ ನಡೆಯಿತು. ಪೊಲೀಸರು ಕೂಡ ಹೊಸ ಜೋಡಿಯ ದಾಂಪತ್ಯಕ್ಕೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)