ನ್ಯೂಸ್

ವಧು ಪಾರ್ಲರ್​ನಲ್ಲಿದ್ದಾಗ ಬಂದ ಆ ಒಂದು ಮೆಸೇಜ್​ನಿಂದಾಗಿ ಮದುವೆಯೇ ಕ್ಯಾನ್ಸಲ್​!

Mandara

ಲಖನೌ: ಮದುವೆ ಎಂದರೆ ಅದೊಂದು ಸಂಬ್ರಮ. ಅದೇ ಸಂಭ್ರಮದಲ್ಲಿದ್ದ ವಧು, ಮದುವೆಯ ಮೇಕಪ್​ಗಾಗಿ ಪಾರ್ಕರ್​ಗೆ ಹೋದ ಸಮಯದಲ್ಲಿ ಆಕೆಯ ಮೊಬೈಲ್​ಗೆ ಬಂದ ಒಂದೇ ಒಂದು ಮೆಸೇಜ್​ನಿಂದಾಗಿ ಮದುವೆಯೇ ಮುರಿದುಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.


ಕಾನ್ಪುರದ ಪಂಕಿ ಪೊಲೀಸ್ ಠಾಣೆ ಪ್ರದೇಶದ ಕಂಗಗಂಜ್ ಕಾಲೋನಿ ನಿವಾಸಿ ಪುಷ್ಪ್ ಲತಾಮಹಾರಾಜಪುರ ಪೊಲೀಸ್ ಠಾಣೆ ಪ್ರದೇಶದ ಕರೌಲಿ ಗ್ರಾಮದ ನಿವಾಸಿ ಕ್ರಾಂತಿ ಸಿಂಗ್ ಜತೆ ಏಪ್ರಿಲ್ 28ರಂದು ಮದುವೆ ನಿಶ್ಚಯವಾಗಿತ್ತು. ಇನ್ನೇನು ಕೆಲ ಗಂಟೆಗಳಲ್ಲಿ ವರನ ಮೆರವಣಿಗೆ ವಧುವಿನ ಮನೆ ಬಾಗಿಲಿಗೆ ಬರುವುದರಲ್ಲಿತ್ತು. ಅದಕ್ಕಾಗಿ ವಧು ತನ್ನ ಗೆಳತಿಯರೊಂದಿಗೆ ಪಾರ್ಲರ್​ಗೆ ತೆರಳಿ ಮೇಕಪ್​ ಮಾಡಿಸಿಕೊಳ್ಳುತ್ತಿದ್ದಳು. ಇನ್ನೇನು ಮೇಕಪ್​ ಮುಗಿದು ಮನೆಗೆ ವಾಪಾಸಾಗಬೇಕೆನ್ನುವಷ್ಟರಲ್ಲಿ ಆಕೆಗೆ ವರನ ಕಡೆಯಿಂದ ಒಂದು ಮೆಸೇಜ್​ ಬಂದಿದೆ. ಮದುವೆ ಮುರಿದುಕೊಂಡಿದ್ದೇವೆ. ಮೆರವಣಿಗೆ ಬರುವುದಿಲ್ಲ ಎಂದು ಮೆಸೇಜ್​ ಕಳುಹಿಸಲಾಗಿದೆ.


ಮೆಸೇಜ್​ ನೋಡಿದ ವಧು ಏನು ಮಾಡಬೇಕೆಂದು ತಿಳಿಯದೆ, ಸೀದಾ ಮನೆಗೆ ಬಂದು ವಿಚಾರ ತಿಳಿಸಿದ್ದಾಳೆ. ಅದಾದ ನಂತರ ಪೊಲೀಸರಿಗೂ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪೂರ್ತಿ ಮಾಹಿತಿ ಪಡೆದಿದ್ದಾರೆ.


ಮದುವೆಗೆಂದು ವಧುವಿನ ಕಡೆಯವರು 30 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. 12 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಅಳಿಯನಿಗಾಗಿ ಖರೀದಿ ಮಾಡಲಾಗಿದೆ. ಆದರೆ ಇನ್ನಷ್ಟು ವರದಕ್ಷಿಣೆ ಆಸೆಗಾಗಿ ವರನ ಕುಟುಂಬ ಈ ರೀತಿ ಮಾಡಿದೆ ಎಂದು ವಧು ದೂರಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಆತನನ್ನು ಮದುವೆಯಾಗುವುದಿಲ್ಲ, ಆತನಿಗೆ ತಕ್ಕ ಶಿಕ್ಷಯಾಗಬೇಕು ಎಂದು ಆಕೆ ಆಕ್ರೋಶ ಹೊರಹಾಕಿದ್ದಾಳೆ. (ಏಜೆನ್ಸೀಸ್​)