| ಕೆ.ಎಂ.ಪಂಕಜ, ಬೆಂಗಳೂರು
ಕರೊನಾ ಸೋಂಕಿನ ಪ್ರಸರಣ ಶುರುವಾದ ಮೇಲೆ ಅತ್ಯಂತ ಗೊಂದಲಕ್ಕೆ ಕಾರಣವಾಗಿದ್ದು, ಕರೊನಾದಿಂದ ಮೃತಪಟ್ಟ ವ್ಯಕ್ತಿಗಳಿಂದ ಸೋಂಕು ಹರಡುತ್ತದೆಯೋ..? ಇಲ್ಲವೋ? ಅಂತ್ಯಸಂಸ್ಕಾರಕ್ಕೆ ಯಾವೆಲ್ಲ ಮುನ್ನೆಚ್ಚರಿಕೆ ಬೇಕು? ಕುಟುಂಬದವರಿಗೆ ಮೃತದೇಹ ನೀಡಬಾರದಾ? ಎಂಬಿತ್ಯಾದಿ ಪ್ರಶ್ನೆಗಳು.
ನೀವೇ ನೋಡಿದ್ದೀರಿ, ಅದೆಷ್ಟೋ ಸೋಂಕಿತರ ಶವಗಳನ್ನು ಹೇಗೆ ಬೇಕಾಬಿಟ್ಟಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದನ್ನು. ಒಂದೇ ಗುಂಡಿಯಲ್ಲಿ ಮೂರ್ನಾಲ್ಕು ಶವಗಳನ್ನು ಎಸೆದು ಮುಚ್ಚಿದ್ದೂ ಉಂಟು. ಒಂದೆಡೆ ಕೇವಲ ಡ್ರಾಪ್ಲೆಟ್ನಿಂದ ಸೋಂಕು ಹರಡುತ್ತದೆ ಎಂದು ಹೇಳತ್ತ, ಮತ್ತೊಂದೆಡೆ ಮೃತದೇಹವನ್ನು ಮನೆಯವರಿಗೆ ನೀಡದೆ, ‘ಅಗಲಿದ ಕುಟುಂಬ ಸದಸ್ಯನ ಮುಖವನ್ನು ಕೊನೆಯ ಬಾರಿಗೂ ನೋಡಲು’ ಅವಕಾಶ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿತು. ಆ ಮೂಲಕ ಇದು ಸರ್ಕಾರದ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿರುವ ಅಧಿಕಾರಿಗಳು, ತಜ್ಞರು ಎನಿಸಿಕೊಂಡವರು ಮಾಡಿದ ಎಡವಟ್ಟುಗಳು ಎಂಬುದು ಸಾಬೀತಾಗಿದೆ.
ಅಮಾನವೀಯ ಶವಸಂಸ್ಕಾರ ಹೆಚ್ಚುತ್ತಿದ್ದಂತೆ ಹೈಕೋರ್ಟ್ ಒಂದು ನಿರ್ದೇಶನ ನೀಡಿತು. ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿತು. ರೋಗಿಯ ಮೃತದೇಹವನ್ನು ಹೇಗೆ ನಿರ್ವಹಣೆ ಮಾಡಬೇಕು, ಹೇಗೆ ಸಂಸ್ಕಾರ ಮಾಡಬೇಕೆಂಬ ಬಗ್ಗೆ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿತು. ಮೃತ ವ್ಯಕ್ತಿಯ ಶ್ವಾಸಕೋಶ ಮಾತ್ರ ಸೋಂಕಿತವಾಗಿರುತ್ತದೆ. ವ್ಯಕ್ತಿ ಉಸಿರಾಟ ನಿಲ್ಲಿಸಿದ ಬಳಿಕ ಸೋಂಕು ಹರಡುವುದಿಲ್ಲ. ಅಗತ್ಯ ಸುರಕ್ಷತಾ ಸಾಧನಗಳನ್ನು ಧರಿಸಿ ಅಂತ್ಯಕ್ರಿಯೆ ನಡೆಸಬೇಕು. ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿತು. ಇದನ್ನೂ ಓದಿ: WEB EXCLUSIVE: ‘ಮ್ಯೂಸಿಯಂ ಮಾಲ್ಗುಡಿ’ಗೆ ಪ್ರವಾಸಿಗರು ಫಿದಾ: ತಿಂಗಳಲ್ಲೇ 5 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ
ಪಾಲಿರ್ಯಾಪ್ರೊಪಿಲೀನ್ ಕರಗೊಲ್ವಂತೆ!
ಕರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಎರಡು ಹಂತದ ಪಾಲಿಪ್ರೊಪಿಲೀನ್ ವಸ್ತುವಿನಲ್ಲಿ ಪ್ಯಾಕ್ ಮಾಡಿ ಮಣ್ಣು ಮಾಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಶುಭ ಸಮಾರಂಭಗಳಲ್ಲಿ ತಾಂಬೂಲ ಕೊಡುವ ಬಟ್ಟೆಯಂತಹ ವಸ್ತುವೇ ಪಾಲಿಪ್ರೊಪಿಲೀನ್. ಆಡುಭಾಷೆಯಲ್ಲಿ ಪ್ಲಾಸ್ಟಿಕ್ ಎನ್ನಲಾಗುವ ಪಾಲಿಎಥಿಲೀನ್ನ ಇನ್ನೊಂದು ರೂಪವೇ ಪಾಲಿಪ್ರೊಪಿಲೀನ್. ಆದರೆ ‘ಪಾಲಿಪ್ರೊಪಿಲೀನ್ ಮಣ್ಣಿನಲ್ಲಿ ಕರಗುವುದರಿಂದಾಗಿ ಶವವನ್ನು ಅದರಲ್ಲಿರಿಸುವುದರಿಂದ ಯಾವುದೇ ತಪ್ಪಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಒಟ್ಟಾರೆ ಶವ ಸಂಸ್ಕಾರ ವಿಚಾರದಲ್ಲಿ ವ್ಯವಸ್ಥೆಯಲ್ಲಿರುವವರ ತಿಳುವಳಿಕೆಯ ಕೊರತೆ ಇದರಿಂದ ಎದ್ದುಕಾಣುತ್ತದೆ.