ಬೆಂಗಳೂರು: ರಾಜ್ಯದಲ್ಲಿ ಎಸ್ಡಿಪಿಐ, ಪಿಎಫ್ಐ, ಕೆಎಫ್ಡಿ ಸಂಘಟನೆಗಳ ನಿಷೇಧಕ್ಕೆ ಅಗತ್ಯವಾದ ಸಾಕ್ಷ್ಯ ಸಂಗ್ರಹಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿರುವಂತೆಯೇ ಶನಿವಾರ ರಾತ್ರಿ ಬೆಂಗಳೂರಿನ ಹೆಗ್ಗಡೆನಗರದ ಎಸ್ಡಿಪಿಐ ಕಚೇರಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿ ವೇಳೆ ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಾಂಧಲೆಯಲ್ಲಿ ಭಾಗಿಯಾಗಿದ್ದ 8 ದಾಳಿಕೋರರೂ ಇದೇ ಸಂದರ್ಭದಲ್ಲಿ ಸೆರೆ ಸಿಕ್ಕಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಮಹತ್ವದ ಪುರಾವೆಗಳಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗಲಭೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಕೊಟ್ಟ ಮಾಹಿತಿ, ಮೊಬೈಲ್ ಕರೆಗಳ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗಲಭೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ. ಈವರೆಗೂ ಬಂಧಿತರಾದ ಪ್ರತಿಯೊಬ್ಬನ ಹೆಸರಲ್ಲಿರುವ ಫೇಸ್ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಲಾಗುತ್ತಿದೆ.
ಇದರ ಮಾಹಿತಿ ಆಧರಿಸಿಯೇ ಶನಿವಾರ ತಡರಾತ್ರಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಡಿಸಿಪಿ ರವಿ ಕುಮಾರ್ ನೇತೃತ್ವದ ಪೊಲೀಸರ ತಂಡ ಹೆಗ್ಗಡೆನಗರದಲ್ಲಿರುವ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿತು. ಈ ವೇಳೆ ಕಚೇರಿಯಲ್ಲಿ ಅವಿತಿದ್ದ 8 ಗಲಭೆಕೋರರನ್ನು ಬಂಧಿಸಲಾಯಿತು.
ಕಚೇರಿಯಲ್ಲೇ ಸಭೆ: ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಹಾಗೂ ಇತರರು ಗಲಭೆ ನಡೆಸುವುದಕ್ಕೆ ಮೊದಲೇ ಹೆಗ್ಗಡೆ ನಗರದ ಕಚೇರಿಯಲ್ಲೇ ಹಲವು ಬಾರಿ ಸಭೆ ನಡೆಸಿದ್ದರು. ಗಲಭೆ ನಡೆದ ಆ.11ರಂದು ಕಚೇರಿಯಲ್ಲಿ ಹಲವರು ಸೇರಿದ್ದರು. ಅವರಲ್ಲಿ ಕೆಲವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಬಳಿ ಗಲಭೆ ಎಬ್ಬಿಸಿದ್ದರು. ಠಾಣೆ ಬಳಿ ಬರಲು ಇತರರಿಗೆ ಸಂದೇಶ ಕಳುಹಿಸಿ ಪ್ರಚೋದನೆ ನೀಡಲಾಗಿತ್ತೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.