ನ್ಯೂಸ್

ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿಎಂ | Gruhalakshmi

ಬೆಂಗಳೂರು: ಇಂದು ಬೆಳಗಾವಿಯ ಸುವರ್ಣಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿಯರ ಜತೆ ಸಂವಾದ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ (Gruhalakshmi) ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.

"ಗೃಹಲಕ್ಷ್ಮಿ ಯೋಜನೆಯ ಹಣದಿಂದ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳ ಜೀವನದಲ್ಲಿ ಆಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ. ಬದುಕಿಗೆ ಹೊಸ ಚೈತನ್ಯ ನೀಡಿದ ಗೃಹಲಕ್ಷ್ಮಿ ಯೋಜನೆಯನ್ನು ಸಾಕಾರಗೊಳಿಸಿದ ನನಗೆ, ಇಲಾಖೆಯ ಸಚಿವರು ಹಾಗೂ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಗೃಹಲಕ್ಷ್ಮಿಯರು ತಿಳಿಸಿದ್ದಾರೆ. ಈ ಎಲ್ಲರ ಮಾತುಗಳು ಕೇಳಿ ಸಂತೃಪ್ತ ಭಾವ ನನ್ನಲ್ಲಿ ಮೂಡಿದೆ" ಎಂದರು.

"ಗೃಹಲಕ್ಷ್ಮಿ ಯೋಜನೆಯಿಂದ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅತ್ತೆ-ಸೊಸೆಯರೇ ಜತೆ ಜತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯೋಜನೆಯಿಂದ ತಮಗಾಗಿರುವ ಲಾಭದ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ಮುಂದುವರಿಸಲಿದ್ದೇವೆ" ಎಂದು ಹೇಳಿದ್ದಾರೆ.