ನ್ಯೂಸ್

ನ್ಯಾಯ ದೊರೆತರೂ ಮತ್ತೆ ಸುಪ್ರೀಂಕೋರ್ಟ್​ ಮೆಟ್ಟಿಲೇರುತ್ತೇನೆಂದು ನಿರ್ಭಯಾ ತಾಯಿ ಹೇಳಿದ್ಯಾಕೆ?

ನವದೆಹಲಿ: ಕಾನೂನಿನ ನೇಣು ಕುಣಿಕೆಯಿಂದ ಪಾರಾಗಲು ಅಪರಾಧಿಗಳು ಏನೇ ತಂತ್ರಗಳನ್ನು ಹೂಡಿದರೂ ಸಹ ನಿರ್ಭಯಾಳ ಅಮಾನವೀಯ ಸಾವಿನ ಪಾಪದಿಂದ ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ದಿನ ನೆನಪಿಸಿದೆ.

ಇಂದು ಬೆಳ್ಳಂಬೆಳಗ್ಗೆಯಷ್ಟೇ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಅಪರಾಧಿಗಳನ್ನು ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ತಡವಾದರೂ ಸರಿಯೇ, ಆದರೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬುದನ್ನು ನಮ್ಮ ಕಾನೂನು ವ್ಯವಸ್ಥೆ ತೋರಿಸಿಕೊಟ್ಟಿದೆ. ಸುದೀರ್ಘ 7 ವರ್ಷ ಕಾಯ್ದಿದ್ದ ನಿರ್ಭಯಾ ಪಾಲಕರಿಗೆ ಕೊನೆಗೂ ನ್ಯಾಯ ಸಿಕ್ಕಿದ್ದು, ಸಂತ್ರಸ್ತೆ ನಿರ್ಭಯಾ ಸಾವಿಗೂ ನ್ಯಾಯ ದೊರಕಿದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾ ದೇವಿ, ನಾನು ಕಾನೂನು ಹೋರಾಟ ಮುಂದುವರಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳು ಯಾವುದೇ ತಂತ್ರಗಳನ್ನು ಹೂಡಿ ಶಿಕ್ಷೆಯನ್ನು ವಿಳಂಬ ಮಾಡದಂತೆ ಮಾರ್ಗಸೂಚಿ ಹೊರಡಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. 

ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್​, ಪವನ್​ ಕುಮಾರ್​ ಗುಪ್ತ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಸಿಂಗ್​ರನ್ನು ಇಂದು ಬೆಳಗ್ಗೆ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಡಿಸೆಂಬರ್​ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.

ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)