ನ್ಯೂಸ್

ನಾನು ಅಲ್ಲ ನಾವು, ಕೈ ಸಂದೇಶ: ಭಾರತ್ ಜೋಡೋದಲ್ಲಿ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಮಾರ್ಗದರ್ಶನ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಕರ್ನಾಟಕದ ಮಟ್ಟಿಗೆ ಮೇಲ್ನೋಟದ ಉದ್ದೇಶದ ಹೊರತಾಗಿ ಚುನಾವಣೆ ಪ್ರಾಥಮಿಕ ತಯಾರಿಯೂ ಆಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ. ಯಾತ್ರೆಯು 21 ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋದರೂ, ಇಡೀ ರಾಜ್ಯದ ಮುಖಂಡರು, ವಿವಿಧ ಘಟಕಗಳು ಹಾಗೂ ಕಾರ್ಯಕರ್ತರನ್ನು ತೊಡಗಿಸುವ ಮೂಲಕ ಇಡೀ ಸಂಘಟನೆಯನ್ನು ಹುರಿದುಂಬಿಸುವ ಕೆಲಸ ನಡೆದಿದೆ. ಇನ್ನೊಂದು ಭಾಗದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿ ಜಿಲ್ಲೆಯ ಪ್ರಮುಖರೊಂದಿಗೆ ಸಮಾಲೋಚನೆ ಮಾಡಿದ್ದಾರೆ, ಅವರ ಪಾಲ್ಗೊಳ್ಳುವಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ಪಕ್ಷಕ್ಕೆ ಅಗತ್ಯವಾಗಿರುವುದು ‘ನಾನು’ ಅಲ್ಲ ‘ನಾವು’ ಎಂಬ ಸ್ಪಷ್ಟ ಸಂದೇಶವನ್ನು ರಾಹುಲ್ ರಾಜ್ಯ ನಾಯಕರಿಗೆ ನೀಡಿ ಹೋಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಪ್ರಮುಖ ನಾಯಕರಿಗೆ ಸಲಹೆ, ಸೂಚನೆ ನೀಡುವ ಜತೆಗೆ ವಿಚಾರ ವಿನಿಮಯ ನಡೆಸಿದ್ದಾರೆ.

ನಾಯಕರಿಗಿಂತ ಪಕ್ಷವೇ ಮುಖ್ಯ, ಪಕ್ಷದ ಮುಖೇನ ನಾಯಕತ್ವ ಬೆಳೆಯಬೇಕು. ನಾಯಕರಿಂದ ಪಕ್ಷವಲ್ಲ, ಪಕ್ಷದಿಂದಾಗಿ ನಾಯಕ ಎಂಬುದು ಒಂದು ಪ್ರಮುಖ ಸಂದೇಶವಾದರೆ, ಪಕ್ಷದ ಸಂಘಟನೆ ಬಲವರ್ಧನೆಗೆ ಶ್ರಮಿಸುವವರಿಗೆ ಮಣೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಕ್ಷದ ಎಲ್ಲ ಹಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವುದಕ್ಕೆ ಮನ್ನಣೆ ನೀಡಬೇಕು. ಮಾಸ್ ಲೀಡರ್ ಆದರೂ ಸಾಲದು, ಪಕ್ಷದ ಬೆಳವಣಿಗೆ, ಕಾರ್ಯ ಕರ್ತರ ದುಡಿಮೆಗೂ ಮನ್ನಣೆ ನೀಡುವುದು ಅಷ್ಟೇ ಮುಖ್ಯ. ಎಂತಹದ್ದೇ ವರ್ಚಸ್ಸು, ಪ್ರಭಾವ, ಜನಬಲ ಹೊಂದಿದ್ದರೂ ಪಕ್ಷಕ್ಕೆ ಮುಡಿಪಾಗಿಟ್ಟರೆ ಪಕ್ಷದ ಭವಿಷ್ಯ ಉಜ್ವಲ, ವೈಯಕ್ತಿಕ ಗುರಿ ಸಾಧನೆಗೂ ಅನುಕೂಲ ಎಂದು ಮುಂಚೂಣಿ ನಾಯಕರಿಗೆ ತಿಳಿಹೇಳಿದ್ದಾರೆಂದು ಹಿರಿಯ ಮುಖಂಡರೊಬ್ಬರು ವಿಜಯವಾಣಿ ತಿಳಿಸಿದ್ದಾರೆ.

ಮೊದಲು ದುಡಿ, ನಂತರ ಕೂಲಿ ಕೇಳು ಎಂಬ ಸೂತ್ರ ಅಳವಡಿಸುವುದು ಸೂಕ್ತ. ಆಗ ಬಹುತೇಕ ಗೊಂದಲ ವ್ಯತ್ಯಾಸಗಳಿಗೆ ಪರಿಹಾರ ಸಿಗಲಿದೆ ಎಂಬ ಸಂಗತಿಯನ್ನು ಮುಂಬರುವ ಟಿಕೆಟ್ ಹಂಚಿಕೆ ಗಮನದಲ್ಲಿಟ್ಟುಕೊಂಡಿರಬೇಕೆಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಇನ್ನು ಭಾರತ್ ಜೋಡೋದ ಪರಿಣಾಮವನ್ನು ಮುಂದೆ ಹೇಗೆ ತೆಗೆದುಕೊಂಡು ಹೋಗುತ್ತೀರಾ ಎಂಬ ವಿಜಯವಾಣಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯ ಸರ್ಕಾರದ ಬಗ್ಗೆ ಜನ ರೋಸಿ ಹೋಗಿದ್ದಾರೆ. 40 ಪರ್ಸೆಂಟ್ ಕಮೀಷನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಭಾರತ್ ಜೋಡೋ ಯಾತ್ರೆ ನಡೆದಿದೆ. ಖಂಡಿತವಾಗಿ ಇದರ ಪರಿಣಾಮವನ್ನು ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಪಕ್ಷದ ಹಿರಿಯ ನಾಯಕರು ಭಾರತ ಜೋಡೋ ಯಾತ್ರೆ ಪರಿಣಾಮದ ಬಗ್ಗೆ ಚರ್ಚೆ ಮಾಡಿದ್ದು, ಯಾವ ವಿಚಾರದಲ್ಲಿ ಸುಧಾರಣೆ ಕಾಣಬೇಕೆಂದು ರ್ಚಚಿಸಿದ್ದಾರೆ. ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಸಾಗುತ್ತೇವೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಪಕ್ಷಕ್ಕೆ ದೊಡ್ಡ ಲಾಭ: ಪಕ್ಷದ ಪಾಲಿಗೆ ಐಕಾನ್ ಎನಿಸಿರುವ ರಾಹುಲ್ ಅವರನ್ನು ಸಮೀಪದಲ್ಲಿ ನೋಡಬೇಕು, ಮಾತ ನಾಡಿಸಬೇಕು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಮಹದಾಸೆ ಇರುತ್ತದೆ. ಈ ಯಾತ್ರೆ ವೇಳೆ ಶಾಸಕರು, ಕಳೆದ ಚುನಾವಣೆ ಸೋತ ಅಭ್ಯರ್ಥಿಗಳು, ಜಿಲ್ಲಾ ಮಟ್ಟದ ಮುಖಂಡರಿಗೆ ರಾಹುಲ್ ಗಾಂಧಿ ಜತೆಗೆ ಒಂದೆರೆಡು ನಿಮಿಷ ಹೆಜ್ಜೆ ಹಾಕಲು ಅವಕಾಶ ನೀಡಲಾಗಿದೆ. ಫೋಟೋ ತೆಗೆಸಿಕೊಂಡಿದ್ದಾರೆ. ಈ ಪ್ರಯತ್ನ ಪಕ್ಷಕ್ಕೆ ದೊಡ್ಡ ಲಾಭ ತಂದುಕೊಡಬಹುದು ಎಂಬುದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅವರ ಅಭಿಪ್ರಾಯವಾಗಿದೆ.

ಆಕಾಂಕ್ಷಿಗಳ ಶಕ್ತಿ ಪ್ರದರ್ಶನ: ಯಾತ್ರೆ ವೇಳೆ ಕಾರ್ಯಕರ್ತರನ್ನು ಕರೆ ತರಲು ಪಕ್ಷದ ಶಾಸಕರು, ಅಭ್ಯರ್ಥಿಗಳು, ಆಕಾಂಕ್ಷಿಗಳಿಗೆ ಸೂಚಿಸಲಾ ಗಿತ್ತು. ಯಾವ ದಿನದಲ್ಲಿ ಯಾರು ಜನರನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದು ತಿಳಿಸಲಾಗಿತ್ತು. ಸಾಕಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳು ಈ ಅವಕಾಶ ಬಳಸಿಕೊಂಡು ಶಕ್ತಿಪ್ರದರ್ಶನ ಮಾಡಿ ತಮ್ಮ ಬಲವನ್ನು ನಾಯಕರ ಮುಂದೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ಯಾತ್ರೆ ಸಾಗಿದ ಕೆಲ ಕಡೆ ಹಾಲಿ ಕಾಂಗ್ರೆಸ್ ಶಾಸಕರಿದ್ದಾಗ್ಯೂ ತಾವೂ ಆಕಾಂಕ್ಷಿ ಎಂದು ದೊಡ್ಡ ಪೋಸ್ಟರ್ ಹಾಕಿಕೊಂಡಿದ್ದರು. ಈ ಬೆಳವಣಿಗೆಯನ್ನು ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಪ್ರಮುಖ ನಾಯಕರೆಲ್ಲರೂ ಧನಾತ್ಮಕವಾಗಿಯೇ ಪರಿಗಣಿಸಿದ್ದಾರೆ ಎಂಬುದು ವಿಶೇಷ ಸಂಗತಿ.