ನ್ಯೂಸ್

ಪುಲ್ವಾಮ ದಾಳಿ ಮಾಡಿಸಿದ್ದು ನಾವೇ: ಸತ್ಯ ಒಪ್ಪಿಕೊಂಡ ಪಾಕ್ ಸಚಿವ..! ​

ಇಸ್ಲಮಾಬಾದ್​: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಪಾಕ್​ ಸಚಿವ ತಮ್ಮದೇ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ.

2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತ ಪ್ಯಾರಾಮಿಲಿಟರಿ ಪಡೆಯ 30 ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ತಮ್ಮ ಪಾತ್ರ ಇರುವುದಾಗಿ ಪಾಕ್​ ಸಚಿವ ಒಪ್ಪಿಕೊಂಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಗೆ ತಮ್ಮ ಪ್ರಾಯೋಜಕತ್ವ ಇರುವುದನ್ನು ಸಂಸತ್ತಿನಲ್ಲಿಂದು ಒಪ್ಪಿಕೊಂಡಿದ್ದಾರೆ.

ನಾವು ಭಾರತ ನೆಲದಲ್ಲೇ ಹೊಡೆದೆವು. ಪುಲ್ವಾಮದಲ್ಲಿನ ನಮ್ಮ ಯಶಸ್ಸು, ಪ್ರಧಾನಿ ಇಮ್ರಾನ್ ಖಾನ್​ ನಾಯಕತ್ವದ ಅಡಿಯಲ್ಲಿರುವ ಜನರ ಯಶಸ್ಸಾಗಿದೆ. ನಾವು ಮತ್ತು ನೀವು ಎಲ್ಲರೂ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದೇವೆ ಎಂದು ಪಾಕ್​ನ ಫೆಡರಲ್​ ಮಿನಿಸ್ಟರ್​ ಫವಾದ್​ ಚೌಧುರಿ ಸಂಸತ್ತಿನಲ್ಲೇ ಬಾಯ್ಬಿಟ್ಟಿದ್ದಾರೆ. ​

ಪುಲ್ವಾಮ ದಾಳಿ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಮತ್ತು ಪಾಕಿಸ್ತಾನ ಫೈಟರ್​ ಜೆಟ್​ಗಳ ನಡುವೆ ಎನ್​ಕೌಂಟರ್ ಸಹ ನಡೆಯಿತು. ಇದಾದ ಬಳಿಕ ಪಾಕ್​ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಮತ್ತು ಸೇನಾ ಮುಖ್ಯಸ್ಥ ಜನರಲ್​ ಕ್ವಾಮರ್ ಜಾವೇದ್ ಬಜ್ವಾ ನಡುವೆ ಸಭೆ ನಡೆದಿದ್ದು, ಇದರಲ್ಲಿ ಚರ್ಚೆಯಾದ ವಿಷಯಗಳನ್ನು ಪಾಕ್​ ಪ್ರತಿಪಕ್ಷ ನಾಯಕ ಅಯಾಜ್​ ಸಾದಿಖ್ ನಿನ್ನೆ (ಅ.28) ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದರು. ಇಂದು ಸಾದಿಖ್ ಭಾಷಣದ ಮೇಲಿನ ಚರ್ಚೆಯ ವೇಳೆ ಪಾಕ್​ ಸಚಿವ ಫವಾದ್​, ಪುಲ್ವಾಮ ದಾಳಿ ಮಾಡಿಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ​

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ನಿನ್ನೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಾದಿಖ್​, ಅಂದು ವರ್ಧಮಾನ್​ ಅಭಿನಂದನ್​ ಅವರನ್ನು ಬಿಡುಗಡೆ ಮಾಡದೇ ಇರ್ತಿದ್ರೆ ಭಾರತವೇನೂ ನಮ್ಮ ಮೇಲೆ ದಾಳಿ ಮಾಡ್ತಾ ಇರಲಿಲ್ಲ. ಇನ್ನೂ ನೆನಪಿದೆ ನನಗೆ. ಅಂದು ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಸಭೆಯಲ್ಲಿದ್ರು. ಪ್ರಧಾನಿ ಇಮ್ರಾನ್ ಖಾನ್​ ಸಭೆ ಹಾಜರಾಗಲು ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್​ ಕ್ವಾಮರ್ ಜಾವೇದ್ ಬಜ್ವಾ ಹಾಜರಿದ್ದರು. ಬೆಜ್ವಾ ಅವರ ಕಾಲುಗಳಲ್ಲಿ ನಡುಕ ಇತ್ತು. ಮುಖದ ತುಂಬಾ ಬೆವರಿತ್ತು. ಅವರು ಹೇಳ್ತಾ ಇದ್ರು – ದೇವರಾಣೆಗೂ ಅಭಿನಂದನ್ ಅನ್ನು ಬಿಟ್ಟು ಬಿಡೋಣ. ರಾತ್ರಿ 9 ಗಂಟೆಗೆ ಭಾರತ ದಾಳಿ ನಡೆಸೋದು ಗ್ಯಾರೆಂಟಿ. ಖುರೇಶಿ ಕೂಡ ನಡುಗುತ್ತಿದ್ದರು, ಬೆವೆತಿದ್ದರು ಎಂದು ಸಾದಿಕ್ ಸಂಸತ್ತಿನಲ್ಲಿ ಆರೋಪಿಸಿದ್ದರು. (ಏಜೆನ್ಸೀಸ್)