ನ್ಯೂಸ್

ನಮಗಿನ್ನೂ ನ್ಯಾಯ ಸಿಕ್ಕಿಲ್ಲ! ಕೋರ್ಟ್​ ತೀರ್ಪಿನ ಬೆನ್ನಲ್ಲೇ ಮೃತ ವೈದ್ಯೆ ತಾಯಿ ಕಣ್ಣೀರು | RG Kar Case

RG Kar Case: ಕಳೆದ ವರ್ಷ ಆಗಸ್ಟ್​ 09ರಂದು ಕೋಲ್ಕತದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿತು. ಯುವ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತೀರ್ಪು ಇಂದು ಪ್ರಕಟವಾಯಿತು. ಕೇಸ್​ನ ಆರೋಪಿಯಾಗಿದ್ದ ಸಂಜಯ್ ರಾಯ್​ನನ್ನು ಅಪರಾಧಿ ಎಂದು ಹೇಳಿದ ನ್ಯಾಯಾಲಯ, ಆತನಿಗೆ ಶಿಕ್ಷೆಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿತು. ಸಹೋದ್ಯೋಗಿಯ ಹತ್ಯೆಯನ್ನು ಖಂಡಿಸಿ, ನ್ಯಾಯಕ್ಕಾಗಿ ನಿರಂತರ ಹಾಗೂ ಉಪವಾಸ ಪ್ರತಿಭಟನೆ ಕೈಗೊಂಡಿದ್ದ ಜೂನಿಯರ್​ ವೈದ್ಯರು ತೀರ್ಪಿನಿಂದ ಸಂತಸ ಪಟ್ಟರೆ, ಮೃತ ವೈದ್ಯೆಯ ತಾಯಿ ಮಾತ್ರ ಗಂಭೀರ ಆರೋಪ ಎಸಗಿದ್ದಾರೆ.

162 ದಿನಗಳ ಬಳಿಕ ಕೋರ್ಟ್​ ಕೊಟ್ಟ ತೀರ್ಪಿಗೆ ಪ್ರತಿಕ್ರಿಯಿಸಿದ ಮೃತ ಟ್ರೈನಿ ವೈದ್ಯೆಯ ತಾಯಿ, "ನಮಗಿನ್ನೂ ನ್ಯಾಯ ಸಿಕ್ಕಿಲ್ಲ. ಸಂಜಯ್​ ರಾಯ್​ನನ್ನು ತಪ್ಪಿತಸ್ಥ ಎಂದು ಕೋರ್ಟ್​ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ, ಆತನೊಬ್ಬ ಮಾತ್ರ ಈ ಕೃತ್ಯ ಎಸಗಿಲ್ಲ. ಅವನ ಜತೆಗೆ ಇನ್ನೂ ಹಲವರ ಕೈಗಳಿವೆ. ಆ ಪಾಪಿಗಳನ್ನೂ ಬಂಧಿಸಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಆಗ್ರಹಿಸಿದರು.

ನಾನು ನಂಬೋದಿಲ್ಲ

"ಸಂಜಯ್ ತಪ್ಪಿತಸ್ಥನೆಂದು ಈಗಾಗಲೇ ವೈದ್ಯಕೀಯ ಪರೀಕ್ಷೆಗಳ ವರದಿಗಳೇ ಸಾಬೀತುಪಡಿಸಿವೆ. ಆ ಸಾಕ್ಷಿಗಳನ್ನು ಕೋರ್ಟ್​ ಕೂಡ ಪರಿಶೀಲಿಸಿದೆ. ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ ಆತ ಮೌನವಾಗಿ ನಿಂತಿದ್ದನ್ನು ನೋಡಿದಾಗ ನನ್ನ ಮಗಳನ್ನು ಹಿಂಸಿಸಿ ಕೊಲ್ಲುವಲ್ಲಿ ಅವನ ಕೈವಾಡ ಇರುವುದು ಸಾಬೀತಾಯಿತು. ಆದರೆ, ಈ ಕೃತ್ಯ ಎಸಗುವಲ್ಲಿ ಅವನೊಬ್ಬನ ಕೈವಾಡವಿದೆ ಎಂಬುದನ್ನು ಮಾತ್ರ ನಾನು ನಂಬೋದಿಲ್ಲ. ಇನ್ನೂ ಬಂಧಿಸದ ಆರೋಪಿಗಳಿದ್ದಾರೆ. ಹೀಗಾಗಿ ನಮಗಿನ್ನೂ ನ್ಯಾಯ ದೊರಕಿಲ್ಲ" ಎಂದು ಹೇಳಿದರು.

ಇದು ಇಲ್ಲಿಗೆ ಮುಗಿದಿಲ್ಲ

"ಈ ಪ್ರಕರಣ ಇಲ್ಲಿಗೆ ಮುಗಿದಿಲ್ಲ. ನಮ್ಮ ಮಗಳ ಹತ್ಯೆಯಲ್ಲಿ ಭಾಗಿಯಾದ ಇತರರಿಗೂ ಶಿಕ್ಷೆಯಾದ ನಂತರವೇ ಮಗಳ ಅತ್ಯಾಚಾರ-ಕೊಲೆ ಕೇಸ್​ ಪೂರ್ಣಗೊಳ್ಳುತ್ತದೆ. ನಾವು ಆ ದಿನಕ್ಕಾಗಿ ಇನ್ನೂ ಕಾಯುತ್ತಿದ್ದೇವೆ. ನ್ಯಾಯ ದೊರಕುವ ದಿನದವರೆಗೆ ನಮಗ್ಯಾರಿಗೂ ನಿದ್ರೆ ಬರುವುದಿಲ್ಲ. ನಮಗೆ ಬೇಕಿರುವುದು ಆ ದಿನ ಮಾತ್ರ" ಎಂದು ಮೃತ ವೈದ್ಯೆಯ ತಾಯಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ,(ಏಜೆನ್ಸೀಸ್).