ರಾಮನಗರ: ಇಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಧ್ಯಕ್ಷರಾಗಿ ಜಯಶ್ರೀ ಸ್ವಾಮಿ ಆಯ್ಕೆ
"ಮೊದಲ ಬಾರಿ ಸಿಎಂ ಆಗಿ ಹತ್ತು ಹಲವು ಭಾಗ್ಯಗಳನ್ನು ನೀಡಿದೆ. ಎರಡನೇ ಬಾರಿ ಸಿಎಂ ಆಗಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಮ್ಮ ಸಾಧನೆಯ ಸಾಕ್ಷಿ ರಾಜ್ಯದ ಜನತೆಯ ಎದುರಿಗೆ ಇಟ್ಟಿದ್ದೀವಿ. ಎಚ್.ಡಿ. ಕುಮಾರಸ್ವಾಮಿ ಅವರೇ, ನೀವು ಏನು ಸಾಧನೆ ಮಾಡಿದ್ದೀರಿ? ಚನ್ನಪಟ್ಟಣ ಜನತೆಯ ಎದುರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ? 400 ಕೋಟಿ ವೆಚ್ಚದ ಹಾಲಿನ ಪುಡಿ ಘಟಕ ಮಾಡಿದ್ದು ನಾವು. ಕನಕಪುರದಲ್ಲಿ 2016ರಲ್ಲಿ ಡೈರಿ ಸಂಕೀರ್ಣವನ್ನು 700 ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದು ನಾವು. ಇಂಥವು ಇನ್ನೂ ಪಟ್ಟಿ ದೊಡ್ಡದಿದೆ. ಕುಮಾರಸ್ವಾಮಿ ಅವರು ಇಂಥಾ ಒಂದೇ ಒಂದನ್ನು ಮಾಡಿದ್ದಾರಾ ಹೇಳಿ ದೇವೇಗೌಡರೇ . ಇದನ್ನು ಚನ್ನಪಟ್ಟಣ ಜನತೆ ಕೂಡ ಕೇಳಬೇಕು" ಎಂದು ಹೇಳಿದರು.
"ಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಸೇರಿ ಗ್ಯಾರಂಟಿಗಳನ್ನು ಸರ್ಕಾರ ಬಂದ್ ಮಾಡುತ್ತದೆ ಎಂದು ದೇವೇಗೌಡರು ದೊಡ್ಡ ಸುಳ್ಳು ಹೇಳಿದ್ದಾರೆ. ದೇವೇಗೌಡರೇ ಒಂದು ಮಾತು ಹೇಳ್ತೀನಿ, ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ. ನಮ್ಮ ಸರ್ಕಾರ ಯಾವ ಗ್ಯಾರಂಟಿಗಳನ್ನೂ ನಿಲ್ಲಿಸುವುದಿಲ್ಲ. ಇದಕ್ಕೆ ನಾನೇ ಗ್ಯಾರಂಟಿ. ವಕ್ಫ್ ವಿಚಾರದಲ್ಲೂ ಬಿಜೆಪಿ ಜತೆ ಸೇರಿ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದ್ದೇವೆ" ಎಂದು ನುಡಿದರು.