ನ್ಯೂಸ್

ನಾವೂ ನಮ್ಮ ವಶದಲ್ಲಿದ್ದ ಚೀನಿ ಯೋಧರನ್ನು ಬಿಟ್ಟುಕಳುಹಿಸಿದ್ದೇವೆ!

ನವದೆಹಲಿ: ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆಯಲ್ಲಿನ ಘರ್ಷಣೆಯ ಬಳಿಕ ವಶಕ್ಕೆ ಪಡೆದುಕೊಂಡಿದ್ದ ಚೀನಾದ ಯೋಧರನ್ನು ಭಾರತ ಕೂಡು ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಹಾಗೂ ಮೂರು ಸೇನೆಗಳ ಮಾಜಿ ಪ್ರಧಾನ ದಂಡನಾಯಕ ವಿ.ಕೆ. ಸಿಂಗ್​ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ನೀಡಿರುವ ಅವರು, ನಮ್ಮ ಭೂಭಾಗವನ್ನು ಪ್ರವೇಶಿಸಿದ್ದ ಚೀನಿ ಯೋಧರನ್ನು ನಾವು ಕೂಡ ವಶಕ್ಕೆ ಪಡೆದುಕೊಂಡಿದ್ದೆವು. ಮಾತುಕತೆಯ ಬಳಿಕ ಅವರು ಹೇಗೆ ತಮ್ಮ ವಶದಲ್ಲಿದ್ದ ಭಾರತೀಯರ ಯೋಧರನ್ನು ಬಿಡುಗಡೆಗೊಳಿಸಿದರೋ, ಹಾಗೆಯೇ ನಾವು ಕೂಡ ಚೀನಿ ಯೋಧರನ್ನು ಬಿಡುಗಡೆ ಮಾಡಿದೆವು ಎಂದು ಹೇಳಿದರು.

ಲಡಾಖ್​ ಬಳಿಯ ಎಲ್​ಎಸಿ ಪ್ರದೇಶದಲ್ಲಿನ ಭಾಗದ ಮೇಲೆ ಭಾರತದ ಹಿಡಿತವಿರುವ ಪ್ರದೇಶಗಳ ಬಗ್ಗೆ ಕೇಳಿದಾಗ, ಗಲ್ವಾನ್​ ಕಣಿವೆಯ ನಿರ್ದಿಷ್ಟ ಭಾಗ ಭಾರತಕ್ಕೂ ಸೇರುತ್ತದೆ. ಆ ಪ್ರದೇಶ ಭಾರತದ ಹಿಡಿತದಲ್ಲೇ ಇದೆ ಎಂದು ಸೇನಾಪಡೆಯ ಮಾಜಿ ಮುಖ್ಯಸ್ಥ ಸ್ಪಷ್ಟಪಡಿಸಿದರು.

ಪೆಟ್ರೋಲ್​ ಪಾಯಿಂಟ್​ 14 ಸದ್ಯ ವಿವಾದದ ಕೇಂದ್ರಬಿಂದು. ಈ ಪ್ರದೇಶ ಈಗಲೂ ಭಾರತದ ಹಿಡಿತದಲ್ಲೇ ಇದೆ. ಗಲ್ವಾನ್​ ಕಣಿವೆಯ ಒಂದು ಭಾಗ ಅವರಿಗೂ ಸೇರಿದ್ದಾಗಿದೆ. ಆದರೆ, ನಮ್ಮ ಪಾಲಿನ ಭಾಗದ ಮೇಲಿನ ಹಿಡಿತ ನಮ್ಮಲ್ಲೇ ಇದೆ. ಈ ಪ್ರದೇಶವನ್ನು ಕಬಳಿಸಲು ಚೀನಾ ಯೋಧರು 1962ರಿಂದಲೂ ಕಾದು ಕುಳಿತಿದ್ದಾರೆ. ಆದರೆ ನಾವು ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.