Kailash Vijayvargiya: ಮಧ್ಯ ಪ್ರದೇಶದ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಡುವಿನ ಬಾಂಧವ್ಯ ಕುರಿತು ಗುರುವಾರ(ಸೆ. 25) ಹೆಸರು ಉಲ್ಲೇಖಿಸದೇ ವ್ಯಂಗ್ಯವಾಡಿ ರಾಜಕೀಯವ ವಿವಾದ ಸೃಷ್ಟಿಸಿದ್ದಾರೆ.
ಶಾಜಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾವು ಹಳೆಯ ಸಂಸ್ಕೃತಿಯ ಜನರು, ನಾವು ನಮ್ಮ ಸಹೋದರಿಯರ ಹಳ್ಳಿಗಳಲ್ಲಿ ನೀರು ಕುಡಿಯುತ್ತಿರಲಿಲ್ಲ. ನಮ್ಮ ತಂದೆ ಮನೆಯಿಂದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಇಂದಿನ ವಿರೋಧ ಪಕ್ಷದ ನಾಯಕರು ಸಾರ್ವಜನಿಕವಾಗಿ ರಸ್ತೆಯಲ್ಲಿ ತಮ್ಮ ಸಹೋದರಿಯನ್ನು ಮುದ್ದು ಮಾಡುತ್ತಾರೆ. ನಾನು ನಿಮಗೆ ಕೇಳುತ್ತೇನೆ, ನಿಮ್ಮಲ್ಲಿ ಯಾರಾದ್ರೂ ನಿಮ್ಮ ತಂಗಿಯರನ್ನು, ಇಲ್ಲ ಮಹಿಳೆಯರನ್ನು ಸಾರ್ವಜನಿಕವಾಗಿ ಮುದ್ದು ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಹೀಗೆ ಮಾಡಲು ಅವರಲ್ಲಿ ನಮ್ಮ ದೇಶದ ಸಂಸ್ಕೃತಿ, ಮೌಲ್ಯಗಳ ಕೊರತೆ ಇದೆ. ಅವರು ವಿದೇಶದಲ್ಲಿ ಅಧ್ಯಯನ ಮಾಡಿದ್ದು, ಅಲ್ಲಿನ ಮೌಲ್ಯಗಳನ್ನು ಹೊಂದಿದ್ದಾರೆ. ಅಂತಹವರಿಗೆ ನಮ್ಮ ಸಂಪ್ರದಾಯಗಳ ಬಗ್ಗೆ ಅರಿವಿರುವುದಿಲ್ಲ. ನಮ್ಮ ಪ್ರಧಾನಿ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಭಾರತ್ ಜೋಡೋ ಮತ್ತೀತರ ಯಾತ್ರೆಗಳಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಆತ್ಮೀಯತೆಯಿಂದ ಹಲವು ಬಾರಿ ತಬ್ಬಿಕೊಂಡು, ಮುದ್ದು ಮಾಡಿದ್ದರು. ಈ ಹಿನ್ನೆಲೆ ಹೆಸರೇಳದೇ ಪರೋಕ್ಷವಾಗಿ ವಿಪಕ್ಷ ನಾಯಕರು ಎಂದು ಸಂಭೋಧಿಸಿ ವಿಜಯವರ್ಗೀಯ ಮಾತನಾಡಿದ್ದು, ರಾಹುಲ್ ಗಾಂಧಿ ಅವರನ್ನೇ ಗುರಿಯಾಗಿಸಿ ಎನ್ನಲಾಗಿದೆ.
ಕೈಲಾಶ್ ವಿಜಯವರ್ಗೀಯ ಹೇಳಿಕೆಗೆ ಕಾಂಗ್ರೆಸ್ ಕಿಡಿ
ಕೈಲಾಶ್ ವಿಜಯವರ್ಗೀಯ ಹೇಳಿಕೆಗೆ ಕಿಡಿಕಾರಿರುವ ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ, ಪವಿತ್ರ ಸಹೋದರ-ಸಹೋದರಿಯರ ಬಾಂಧವ್ಯವನ್ನು ಅವಮಾನಿಸಲು ಕೈಲಾಶ್ ವಿಜಯವರ್ಗೀಯ ಮಾತೃ ದೇವತೆಯನ್ನು ಪೂಜಿಸುವ ನವರಾತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಭಾಷೆ ಎಲ್ಲರಿಗೂ ತಿಳಿದಿದೆ. ಮಹಿಳೆಯರನ್ನು ಪದೇ ಪದೇ ಅವಮಾನಿಸಿದ್ದಾರೆ. ಬಟ್ಟೆ, ಶಿಕ್ಷಣ, ಮಾತಿನ ಬಗ್ಗೆ ಅವಮಾನಿಸಿದ್ದಾರೆ. ಅಂತಹವರ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)