

N Balakrishna: ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಮಾಜಿ ಸಿಎಂ ಮತ್ತು ವೈಎಸ್ಆರ್ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿಯನ್ನು ಗುರುವಾರ(ಸೆ. 25) ಟಿಡಿಪಿ ಶಾಸಕ ಮತ್ತು ನಟ ನಂದಮೂರಿ ಬಾಲಕೃಷ್ಣ, ಸೈಕೋ ಎಂದು ಕರೆದಿದ್ದು, ಚಿರಂಜೀವಿಗೆ ಅಂತಹ ಸೀನ್ ಇಲ್ಲ ಎಂದು ಆಂಧ್ರಪ್ರದೇಶ ರಾಜಕೀಯದಲ್ಲಿ ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ.
ಆಂಧ್ರ ವಿಧಾನಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಕಾಮಿನೇನಿ ಶ್ರೀನಿವಾಸ್, ಹಿಂದಿನ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರ ಚಿತ್ರರಂಗವನ್ನು ನಿರ್ಲಕ್ಷಿಸಿತ್ತು. ಅಂದು ಚಿತ್ರರಂಗದ ಪ್ರಮುಖರನ್ನು ಭೇಟಿಯಾಗದೇ ಅವಮಾನಿಸಲಾಗಿತ್ತು. ಚಿರಂಜೀವಿ ಮಧ್ಯಪ್ರವೇಶಿಸಿದ್ದರಿಂದಲೇ ಜಗನ್ಮೋಹನ್ ರೆಡ್ಡಿ ಭೇಟಿಗೆ ಒಪ್ಪಿಕೊಂಡಿದ್ದರು ಎಂದು ಹೇಳಿದ್ದರು.
ಈ ಮಾತಿಗೆ ಪ್ರತಿಯಾಗಿ ಸದನದಲ್ಲೇ ಪ್ರತಿಕ್ರಿಯಿಸಿದ ಬಾಲಕೃಷ್ಣ, ಅದು ಸುಳ್ಳು, ಚಿರಂಜೀವಿ ಹೇಳಿದ್ದರಿಂದಲೇ ಭೇಟಿಯಾದರು ಎನ್ನುವುದೆಲ್ಲ ಸುಳ್ಳು. ಅವರಿಗೆ ಅಂತಹ ಸೀನ್ ಇಲ್ಲ ಎಂದಿದ್ದಾರೆ. ಮುಂದುವರೆದು ಆ ಸೈಕೋ ಭೇಟಿ ಮಾಡಲು ತಮ್ಮನ್ನು ಆಹ್ವಾನಿಸಲಾಗಿತ್ತು. ಆದರೆ ನಾನೇ ಹೋಗದಿರಲು ನಿರ್ಧರಿಸಿದ್ದೆ ಎಂದು ವಾಗ್ದಾಳಿ ನಡೆಸಿದ್ದರು.
ಬಾಲಕೃಷ್ಣ ಹೇಳಿಕೆಗೆ ವೈಎಸ್ಆರ್ಸಿಪಿ ತಿರುಗೇಟು
ಬಾಲಕರಷ್ಣ ಹೇಳಿಕೆಗೆ ಪ್ರತಿದಾಳಿ ನಡೆಸಿದತಿವೈಎಸ್ಆರ್ಸಿಪಿ ನಾಯಕರು, ಅವರ ಹೇಳಿಕೆ ಮಾನಸಿಕ ಸ್ಥಿತಿಯನ್ನು ಬಹಿರಂಗಪಡಿಸಿದೆ. ವಿಧಾನಸಭೆಯು ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯಾಗಿದೆ. ಚಲನಚಿತ್ರ ಶೈಲಿಯ ಸಂವಾದಗಳಿಗೆ ವೇದಿಕೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಾಲಕೃಷ್ಣ ಅವರಿಗೆ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಶಾಸಕರಾಗಿ ಮುಂದುವರಿಯಲು ಅವರು ಅನ್ಫಿಟ್. ಸಿನಿಮಾ ನಾಯಕನಾಗಿರಬಹುದು, ಆದರೆ ವೈಎಸ್ ಜಗನ್ ಜನರ ನಿಜವಾದ ನಾಯಕ. ಇಂತಹ ಅಸಂಸದೀಯ ಭಾಷೆಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಟ ಬಾಲಯ್ಯ ಹೇಳಿಕೆಗೆ ಮೆಗಸ್ಟಾರ್ ಚಿರಂಜೀವಿ ಸ್ಪಷ್ಟನೆ
ಇನ್ನು ಬಾಲಯ್ಯ ಹೇಳಿಕೆ ವಿವಾದವಾಗುತ್ತಿದ್ದಂತೆ ಮೆಗಸ್ಟಾರ್ ಚಿರಂಜಿವಿ, ಅಂದಿನ ಸಿಎಂ ಜಗನ್ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಭೇಟಿ ಪರಸ್ಪರ ಗೌರವ ಆಧಾರಗಳಿಂದ ಕೂಡಿತ್ತು. ಅವರು ಯಾವಾಗಲೂ ಪರಸ್ಪರ ಗೌರವದಿಂದ ನಡೆಸಿಕೊಳ್ಳುತ್ತಾರೆ. ಅದು ಸಿಎಂ ಆಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ಜಗನ್ ಮೋಹನ್ ರೆಡ್ಡಿಯವರು ನಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸಿದರು ಎಂದು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಿರ್ಮಾಪಕರು, ನಿರ್ದೇಶಕರು ಮತ್ತು ಉದ್ಯಮ ಪ್ರತಿನಿಧಿಗಳು ಅಂದಿನ ಸಿಎಂ ಜೊತೆ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಟಿಕೆಟ್ ಬೆಲೆ ಏರಿಕೆ ಕುರಿತು ಚರ್ಚಿಸಲು ನನ್ನನ್ನು ಸಂಪರ್ಕಿಸಿದ್ದರು. ಮೊದಲು ಸಚಿವ ಪೆರ್ನಿ ನಾನಿ ಅವರೊಂದಿಗೆ ಸಮನ್ವಯ ಸಾಧಿಸಿದ ಬಳಿಕ ಸಿಎಂರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದೆವು.
ಸಭೆಗೆ ಹೋಗುವ ಮುನ್ನ ನಟ ಬಾಲಕೃಷ್ಣ ಅವರನ್ನು ಕರೆಯಲು ಕರೆ ಮಾಡಿದ್ದೆ, ಆದರೆ ಅವರು ಫೋನ್ ಕರೆಗೆ ಸಿಕ್ಕಿರಲಿಲ್ಲ. ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪವಾದಾಗಿನಿಂದ ಈ ಹೇಳಿಕೆ ನೀಡಿದ್ದೇನೆ. ಸಾರ್ವಜನಿಕರಿಗೆ ಸತ್ಯಗಳನ್ನು ತಿಳಿಸುವುದು ಮುಖ್ಯ. ವೈಯಕ್ತಿಕ ದಾಳಿಗಳನ್ನು ಆಶ್ರಯಿಸುವುದಿಲ್ಲ, ಘನತೆಯಿಂದ ವರ್ತಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)