ನವದೆಹಲಿ: ಭಾರತದ ಚುನಾವಣಾ ಆಯೋಗವು (ಇಸಿಐ) ಮಂಗಳವಾರ (ಅಕ್ಟೋಬರ್ 15) ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ಜತೆಗೆ 2 ಲೋಕಸಭಾ ಸ್ಥಾನಗಳ ಉಪಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ. ವಯನಾಡು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವಣೆ(Wayanad By Election) ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದೆ.
47 ವಿಧಾನಸಭಾ ಕ್ಷೇತ್ರಗಳೊಂದಿಗೆ ಉಪಚುನಾವಣೆ ನಡೆಸಲಾಗುವ ಏಕೈಕ ಲೋಕಸಭಾ ಕ್ಷೇತ್ರ ವಯನಾಡು. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನಾಂಕದಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ವಾಸ್ತವವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು. ಒಂದು ಕೇರಳದ ವಯನಾಡು ಮತ್ತು ಇನ್ನೊಂದು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ. ಸ್ಪರ್ಧಿಸಿದ ಎರಡೂ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆದ್ದಿದ್ದರು ಆದರೆ ಅವರು ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿದರು.
4,31,770 ಮತಗಳ ದಾಖಲೆಯ ಅಂತರದಿಂದ ಗೆದ್ದರು ರಾಹುಲ್ ಗಾಂಧಿ ಅವರು ವಯನಾಡು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಆ ಸ್ಥಾನದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದರು. ಈಗ ವಯನಾಡು ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಆ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಸಾಧ್ಯತೆ ಇದೆ.(ಏಜೆನ್ಸೀಸ್)