ನ್ಯೂಸ್

ಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳನ್ನು ವೀಕ್ಷಿಸುವುದು, ಸಂಗ್ರಹಿಸಿಟ್ಟುಕೊಳ್ಳುವುದು ಅಪರಾಧ: ಸುಪ್ರೀಂಕೋರ್ಟ್​

ನವದೆಹಲಿ: ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ವೀಕ್ಷಿಸುವುದು, ಡೌನ್​ಲೋಡ್​ ಮಾಡುವುದು ಮತ್ತು ಸಂಗ್ರಹಿಸಿ ಇಟ್ಟುಕೊಳ್ಳುವುದು ಪೋಕ್ಸೋ ಕಾಯಿದೆ ಅಡಿ ಅಪರಾಧ ಎಂದು ಸುಪ್ರೀಂಕೋರ್ಟ್ ಇಂದು (ಸೆ.23)​ ಮಹತ್ವದ ತೀರ್ಪು ಪ್ರಕಟಿಸಿದೆ.

ಈ ಹಿಂದೆ ತೀರ್ಪು ನೀಡಿದ್ದ ಮದ್ರಾಸ್​ ಹೈಕೋರ್ಟ್​ ಮಕ್ಕಳ ಅಶ್ಲೀಲ ಕಂಟೆಂಟ್​ಗಳನ್ನು ಡೌನ್​ಲೋಡ್​ ಮಾಡುವುದು ಮತ್ತು ವೀಕ್ಷಿಸುವುದು ಶಿಕ್ಷಾರ್ಹ ಅಪರಾಧವಲ್ಲ ಎಂದಿತ್ತು. ಆದರೆ, ಈ ತೀರ್ಪನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದ್ದು, ಮಕ್ಕಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ತೀರ್ಪು ನೀಡುವ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್​ ಘನ ಘೋರ ತಪ್ಪನ್ನು ಎಸಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾರನ್ನು ಒಳಗೊಂಡ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋ ಡೌನ್‌ಲೋಡ್ ಮಾಡಿದ ಮತ್ತು ವೀಕ್ಷಿಸಿದ ಆರೋಪದ ಮೇಲೆ ಚೆನ್ನೈನ 28 ವರ್ಷದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಜನವರಿ 11ರಂದು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತು. ಇಂತಹ ಅಶ್ಲೀಲ ವಿಷಯಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಹೈಕೋರ್ಟ್​ ಹೇಳಿತ್ತು. ಇದೇ ಪ್ರಕರಣ ಸಂಬಂಧ ಇಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಚೆನ್ನೈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಮರುಸ್ಥಾಪಿಸಿತು.

ಮಕ್ಕಳ ಅಶ್ಲೀಲತೆ ಪದವನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು ಎಂದು ಬದಲಿಸಲು ತಿದ್ದುಪಡಿ ತರುವಂತೆ ಇದೇ ಸಂದರ್ಭದಲ್ಲಿ ಉನ್ನತ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಕೇಳಿದೆ. ಅಲ್ಲದೆ, ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ 'ಮಕ್ಕಳ ಅಶ್ಲೀಲತೆ' ಎಂಬ ಪದವನ್ನು ಬಳಸದಂತೆ ಇತರ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. (ಏಜೆನ್ಸೀಸ್)