ನ್ಯೂಸ್

ಲಿವ್​-ಇನ್​-ರಿಲೇಷನ್​ಶಿಪ್​ ಅಪಾಯಕಾರಿ ಕಡಿವಾಣ ಹೇರಲು ಕಠಿಣ ಕಾನೂನು ಜಾರಿಗೊಳಿಸಬೇಕು: ಬಿಜೆಪಿ ಸಂಸದ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಲಿವ್​ ಇನ್ ರಿಲೇಷನ್​ಶಿಪ್​ ಅತ್ಯಂತ ಅಪಾಯಕಾರಿ ಖಾಯಿಲೆಯಾಗಿ ಪರಿಣಮಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಹರಿಯಾಣದ ಭಿವಾನಿ-ಮಹೇಂದ್ರಗಢ ಬಿಜೆಪಿ ಸಂಸದ ಧರಂಬೀರ್ ಸಿಂಗ್​ ಆಗ್ರಹಿಸಿದ್ದಾರೆ. ಪ್ರೇಮ ವಿವಾಹಗಳಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಿದ್ದು, ಮದುವೆಗೆ ವಧುವರರ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಲೋಕಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಸಮಾಜದ ದೊಡ್ಡ ವರ್ಗವು ಇಂದಿಗೂ ಪೋಷಕರು ಅಥವಾ ಸಂಬಂಧಿಕರು ಏರ್ಪಡಿಸುವ ಮದುವೆಗಳಿಗೆ ಆದ್ಯತೆ ನೀಡುತ್ತದೆ ಎಂದಿದ್ದಾರೆ.

ನಾನು ಅತ್ಯಂತ ಗಂಭೀರವಾದ ವಿಷಯವನ್ನು ಸರ್ಕಾರ ಮತ್ತು ಸಂಸತ್ತಿನ ಗಮನಕ್ಕೆ ತರಲು ಬಯಸುತ್ತೇನೆ. ಭಾರತೀಯ ಸಂಸ್ಕೃತಿಯು ವಸುಧೈವ ಕುಟುಂಬಕಮ್ ಮತ್ತು ಸಹೋದರತ್ವದ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಿದೆ. ನಮ್ಮ ಸಾಮಾಜಿಕ ರಚನೆಯು ಪ್ರಪಂಚದ ಇತರರಿಗಿಂತ ಭಿನ್ನವಾಗಿದೆ. ನಮ್ಮ ವೈವಿಧ್ಯತೆಯಲ್ಲಿ ಏಕತೆಯಿಂದ ಇಡೀ ಜಗತ್ತು ಪ್ರಭಾವಿತವಾಗಿದೆ.

ಭಾರತವು ಅರೇಂಜ್ಡ್ ಮ್ಯಾರೇಜ್‌ಗಳ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ. ಸಮಾಜದ ದೊಡ್ಡ ವರ್ಗವು ಇಂದಿಗೂ ಪೋಷಕರು ಅಥವಾ ಸಂಬಂಧಿಕರು ಏರ್ಪಡಿಸುವ ಮದುವೆಗಳಿಗೆ ಆದ್ಯತೆ ನೀಡುತ್ತದೆ. ಮದುವೆಯು ಏಳು ತಲೆಮಾರುಗಳವರೆಗೆ ಮುಂದುವರಿಯುವ ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ವಿಚ್ಛೇದನ ಪ್ರಮಾಣ ಸುಮಾರು ಶೇ. 1.1 ರಷ್ಟಿದೆ. ಆದರೆ ಅಮೆರಿಕಾದಲ್ಲಿ ಶೇಕಡಾ 40 ರಷ್ಟಿದೆ.

ಅರೇಂಜ್ಡ್ ಮದುವೆಗಳಲ್ಲಿ ವಿಚ್ಛೇದನದ ಪ್ರಮಾಣ ತುಂಬಾ ಕಡಿಮೆ ಎಂದು ಗಮನಿಸಲಾಗಿದೆ. ಆದರೆ, ಇತ್ತೀಚೆಗೆ ವಿಚ್ಛೇದನದ ಪ್ರಮಾಣ ಸಾಕಷ್ಟು ಹೆಚ್ಚಳವಾಗಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಪ್ರೇಮ ವಿವಾಹಗಳು ಎಂದು ಹರಿಯಾಣದ ಭಿವಾನಿ-ಮಹೇಂದ್ರಗಢ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.