ಮುಂಬೈ: ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ನವರಾತ್ರಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ.
ನವರಾತ್ರಿ ಸಂದರ್ಭದಲ್ಲಿ ಗಾರ್ಬಾ ನೃತ್ಯವು ಹೆಚ್ಚು ಪ್ರಸಿದ್ದಿ ಪಡೆದಿದ್ದು, ದೇಶದ ವಿವಿಧ ಭಾಗಗಳಲ್ಲಿ ಈ ನೃತ್ಯವನ್ನು ಮಾಡುವ ಮೂಲಕ ದೇವಿಗೆ ವಿಶಿಷ್ಟವಾಗಿ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ. ಇದೀಗ ಅಜ್ಜಿಯೊಬ್ಬರು ಯುವತಿಯರ ಸರಿಸಮಾನವಾಗಿ ಗಾರ್ಬಾ ನೃತ್ಯ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ನವರಾತ್ರಿ ಸಂಭ್ರಮದ ವೇಳೆ ಯುವತಿಯರ ಜತೆ ಹೆಜ್ಜೆ ಗಾರ್ಬಾ ನೃತ್ಯ ಮಾಡುತ್ತಿದ್ದಾರೆ. ಯುವತಿ ಹಾಗೂ ಮಹಿಳೆಯರ ಸರಿಸಮಾನವಾಗಿ ಅಜ್ಜಿ ಕುಣಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. 2019ರ ನವರಾತ್ರಿ ಸಂಭ್ರಮದ ವೇಳೆ ಅಜ್ಜಿ ಗಾರ್ಬಾ ನೃತ್ಯ ಮಾಡಿದ ವಿಡಿಯೋ ಸಹ ವೈರಲ್ ಆಗಿತ್ತು.
ಇತ್ತ ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ವಯಸು ಬರೀ ಸಂಖ್ಯೆ ಎಂದು ಈ ಅಜ್ಜಿ ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ದಾದಿ (ಅಜ್ಜಿ) ಹಾಕುತ್ತಿರುವ ಹೆಜ್ಜೆಗಳು ಎಂತಹವರನ್ನು ನಾಚಿ ನೀರಾಗಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.