ನಾಗಮಂಗಲ ತಾಲೂಕು ಕಚೇರಿ ಬಳಿ ಕಸದ ಬುಟ್ಟಿಯಲ್ಲಿ ರೈತರ ಭೂ ದಾಖಲೆಗಳು ಪತ್ತೆ 
ನ್ಯೂಸ್

ರೈತರ ಕಡತಗಳಿಗೆ ಕಸದ ಬುಟ್ಟಿ ಭಾಗ್ಯ: ನಾಗಮಂಗಲ ಉಪ ತಹಶೀಲ್ದಾರ್ ತಲೆದಂಡ! | Mandya Land Records

  • ನಾಗಮಂಗಲ ತಾಲೂಕು ಕಚೇರಿಯ ಕಸದ ಬುಟ್ಟಿಯಲ್ಲಿ ರೈತರ ಭೂ ದಾಖಲೆಗಳು ಪತ್ತೆ

  • ಪ್ರಕರಣದಲ್ಲಿ ನಾಗಮಂಗಲ ಉಪ ತಹಶೀಲ್ದಾರ್ ಎಂ. ಮಂಜುನಾಥ್ ಅಮಾನತು

  • ಕಸದ ತೊಟ್ಟಿ ಸೇರಿದ್ದ ಆರ್‌ಟಿಸಿ, ಎಂಆರ್ ಹಾಗೂ ಇಂಡೆಕ್ಸ್ ಸೇರಿ ಮಹತ್ವದ ದಾಖಲೆಗಳು

Mandya Land Records: ನಾಗಮಂಗಲ ತಾಲೂಕು ಕಚೇರಿ ಬಳಿ ಕಸದ ಬುಟ್ಟಿಯಲ್ಲಿ ರೈತರ ಭೂ ದಾಖಲೆಗಳು ಪತ್ತೆಯಾದ ವಿವಾದಕ್ಕೆ ಸಂಬಂಧಿಸಿದಂತೆ, ಕಡತ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ್ದ ಉಪ ತಹಶೀಲ್ದಾರ್ ಎಂ. ಮಂಜುನಾಥ್ ಅವರನ್ನು ಕಂದಾಯ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ನಾಗಮಂಗಲ ತಾಲೂಕು ಕಚೇರಿಯಲ್ಲಿ ಕಡತಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಅವರ ಕರ್ತವ್ಯ ಲೋಪ ಸಾಬೀತಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರ ಸ್ಪಷ್ಟ ವರದಿಯ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಈ ಕ್ರಮ ಕೈಗೊಂಡಿದ್ದಾರೆ. ಉಲ್ಲೇಖಾರ್ಹವೆಂದರೆ, ಇದೇ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದ್ವಿತೀಯ ದರ್ಜೆ ಸಹಾಯಕ ಎಂ. ಅಶೋಕ್ ಕುಮಾರ್ ಕೂಡ ಸಸ್ಪೆಂಡ್ ಆಗಿದ್ದರು.

ಕಸದ ಬುಟ್ಟಿಯಲ್ಲಿ ರೈತರ ಭೂ ದಾಖಲೆ ಪತ್ತೆ

ಕಳೆದ ಸೆಪ್ಟೆಂಬರ್ 15ರಂದು ನಾಗಮಂಗಲ ತಾಲೂಕು ಕಚೇರಿ ಪಕ್ಕದ ಕಸದ ಬುಟ್ಟಿಯಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ (RTC), ಎಂಆರ್ (MR), ಇಂಡೆಕ್ಸ್ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿದ್ದವು. ತಾಲೂಕು ಕಚೇರಿಯ ದಾಖಲೆ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಬೇಕಿದ್ದ ಹಳೆಯ ದಾಖಲೆಗಳನ್ನು ಕಸದ ಬುಟ್ಟಿಗೆ ಎಸೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಭ್ರಷ್ಟಾಚಾರ ಬಯಲಾಗುವ ಭಯದಿಂದ ಕೃತ್ಯ?

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಬಯಲಾಗುವ ಭಯದಿಂದಲೇ ದಾಖಲೆಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.

ಇದನ್ನೂ ಓದಿ: ಪ್ರಕೃತಿಯ ವಿಸ್ಮಯ: ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ ನೈಸರ್ಗಿಕವಾಗಿ ಜನಿಸಿದ ಆಲಿವ್ ರಿಡ್ಲಿ ಆಮೆ ಮರಿಗಳು! | California Sea Turtle Egg

ದಾಖಲೆಗಳ ಸರಿಯಾದ ನಿರ್ವಹಣೆ ಮಾಡದ ಆರೋಪದ ಹಿನ್ನೆಲೆಯಲ್ಲಿ ಇದೀಗ ಉಪ ತಹಶೀಲ್ದಾರ್ ಮಂಜುನಾಥ್ ಅವರನ್ನೂ ಅಮಾನತುಗೊಳಿಸಲಾಗಿದೆ. ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.