ನೆಟ್ಟಿಗರ ಸಿಒಡಿ ಪ್ರ್ಯಾಂಕ್‌ಗೆ ಕಂಗಾಲಾದ ಮಧುರೈ ಇನ್‌ಫ್ಲುಯೆನ್ಸರ್ ವೀರಮಣಿ 
ನ್ಯೂಸ್

ಫೋನ್ ನಂಬರ್, ಅಡ್ರೆಸ್ ಕೊಟ್ಟಿದ್ದೇ ತಪ್ಪಾಯ್ತಾ?: ದೀಪಾವಳಿ ಗಿಫ್ಟ್ ಆಸೆಗೆ ಬಿದ್ದು ಊರನ್ನೇ ಬಿಡುವಂತಾದ Madurai Veeramani!

ದೀಪಾವಳಿ ಗಿಫ್ಟ್ ಆಸೆಗೆ ವಿಳಾಸ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದ ಮಧುರೈ ಇನ್‌ಫ್ಲುಯೆನ್ಸರ್ ವೀರಮಣಿ. ನೆಟ್ಟಿಗರ COD ಪ್ರ್ಯಾಂಕ್‌ಗೆ ಲಕ್ಷಾಂತರ ರೂ. ಬಿಲ್ ಬಂದು ಮನೆ ಮುಂದೆ ಜಾತ್ರೆ, ಊರು ಬಿಡುವ ಪರಿಸ್ಥಿತಿ! ಸಂಪೂರ್ಣ ಸುದ್ದಿ ಇಲ್ಲಿದೆ.

ಮಧುರೈ: ಜೀವನದಲ್ಲಿ ವಿಶ್ವಾಸವಿರಬೇಕು, ಆದರೆ ಅತಿಯಾದ ಆತ್ಮವಿಶ್ವಾಸ ಆಪತ್ತಿಗೆ ಆಹ್ವಾನವೆಂದು ಹಿರಿಯರು ಹೇಳುತ್ತಾರೆ. ಈಗ ಈ ಮಾತು ಒಬ್ಬ ಸೋಷಿಯಲ್​ ಮೀಡಿಯಾ ಇನ್ಫ್ಲ್ಯೂಎನ್ಸರ್ ಜೀವನದಲ್ಲಿ ಸಾಭೀತಾಗಿದೆ. ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಂದ ಸಿಹಿ ತಿಂಡಿ ಗಿಫ್ಟ್ ಪಡೆಯೋ ಆಸೆಗೆ ಬಿದ್ದು ಮಾಡಿದ ಒಂದು ಸಣ್ಣ ಎಡವಟ್ಟು, ಈಗ ಅವನ ಜೀವನವನ್ನೇ ಅಸ್ತವ್ಯಸ್ತ ಮಾಡಿದೆ.

ತಮಿಳುನಾಡಿನ ಮಧುರೈನ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವೀರಮಣಿ ಎಂಬ ಯುವಕನಿಗೆ ಈಗ ನಿದ್ದೆಯಿಲ್ಲದ ರಾತ್ರಿಗಳು ಶುರುವಾಗಿವೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ, ನನ್ನ ಪ್ರೀತಿಯ ಫಾಲೋವರ್ಸ್ ಯಾರಾದ್ರೂ ಸ್ವೀಟ್ಸ್ ಕಳುಹಿಸೋದಿದ್ರೆ ಕಳುಹಿಸಿ ಎಂದು ತಮ್ಮ ಫೋನ್ ನಂಬರ್ ಮತ್ತು ಮನೆಯ ಪೂರ್ಣ ವಿಳಾಸವನ್ನು ಅವರು ಹಂಚಿಕೊಂಡಿದ್ದರು. ಆದರೆ, ಆ ನಂತರ ನಡೆದ ಘಟನೆಗಳು ಆತನಿಗೆ ಸಿಹಿಯ ಬದಲು ಕಹಿ ಅನುಭವವನ್ನೇ ನೀಡಿವೆ.

ಅರ್ಧ ಗಂಟೆಯಲ್ಲಿ 15 ಪಾರ್ಸಲ್! ಸಾಲುಗಟ್ಟಿ ನಿಂತ ಡೆಲಿವರಿ ಬಾಯ್ಸ್

ಪೋಸ್ಟ್ ಹಾಕಿದ್ದೇ ತಡ, ನೆಟ್ಟಿಗರು ಶುರುಮಾಡಿದ ಪ್ರ್ಯಾಂಕ್ ಆತನ ಬದುಕನ್ನೇ ತಿರುವು ಮುರುಗಾಗಿಸಿದೆ. ಸ್ವೀಟ್ ಬಾಕ್ಸ್‌ಗಳು ಬರುವ ಬದಲು, ಲಕ್ಷಾಂತರ ರೂಪಾಯಿ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳು ಮನೆ ಬಾಗಿಲಿಗೆ ಬರಲಾರಂಭಿಸಿದವು. ಒಂದರ ಹಿಂದೆ ಒಂದರಂತೆ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ವಾಹನಗಳು ಬಂದು ನಿಂತಿವೆ.

ಮನೆಯ ಬಾಗಿಲಿಗೆ ಲಕ್ಷಾಂತರ ಮೌಲ್ಯದ ವಸ್ತುಗಳು ‘ಕ್ಯಾಶ್ ಆನ್ ಡೆಲಿವರಿ’ (COD) ರೂಪದಲ್ಲಿ ವೀರಮಣಿ ಮನೆ ಬಾಗಿಲನ್ನು ತಲುಪಿವೆ. ಯಾರದೋ ಕಿಡಿಗೇಡಿತನಕ್ಕೆ ವೀರಮಣಿ ಮನೆಗೆ ಬರೋಬ್ಬರಿ 1.69 ಲಕ್ಷ ರೂಪಾಯಿ ಬೆಲೆಯ ಟಿವಿ, ಫ್ರಿಡ್ಜ್‌, ವಾಷಿಂಗ್ ಮೆಷಿನ್‌, ಸ್ಮಾರ್ಟ್‌ಫೋನ್‌ಗಳು ಸಾಲಾಗಿ ಬಂದಿಳಿದಿವೆ. ಬಡಪಾಯಿ ಡೆಲಿವರಿ ಹುಡುಗರು "ಸರ್, ಓಟಿಪಿ ಕೊಡಿ, ದುಡ್ಡು ಕೊಡಿ" ಎಂದು ಬಾಗಿಲು ಬಡಿಯುತ್ತಿದ್ದರೆ, ಏನು ಮಾಡಬೇಕೆಂದು ತೋಚದೆ ವೀರಮಣಿ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಜೆಸಿಬಿ, ಮಿಲಿಟರಿ ಟ್ಯಾಂಕ್‌ಗಳಿಗೂ ಬುಕಿಂಗ್!

ಕಿಡಿಗೇಡಿಗಳ ವಿಕೃತಿ ಇಷ್ಟಕ್ಕೇ ನಿಲ್ಲದೆ, ಜೆಸಿಬಿ (JCB) ಅಷ್ಟೇ ಏಕೆ ಮಿಲಿಟರಿ ಟ್ಯಾಂಕ್‌ಗಳಿಗೂ ಆತನ ಹೆಸರಲ್ಲಿ ನಕಲಿ ಬುಕಿಂಗ್ ಮಾಡಿ ಸತಾಯಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅತ್ತ ಬಿರಿಯಾನಿ, ಪಿಜ್ಜಾ ಹಿಡಿದು ಬರುವ ಡೆಲಿವರಿ ಬಾಯ್ಸ್ ಒಂದೆಡೆಯಾದರೆ, ಇತ್ತ ಲಕ್ಷಾಂತರ ರೂಪಾಯಿ ಬಿಲ್ ಹಿಡಿದು ಬರುವ ಎಲೆಕ್ಟ್ರಾನಿಕ್ಸ್ ಡೆಲಿವರಿ ಸಿಬ್ಬಂದಿ ಇನ್ನೊಂದೆಡೆ. ಕೇವಲ ಅರ್ಧ ಗಂಟೆಯ ಅವಧಿಯಲ್ಲೇ ಬರೋಬ್ಬರಿ 15ಕ್ಕೂ ಹೆಚ್ಚು ಪಾರ್ಸಲ್‌ಗಳು ಬಂದಿಳಿದು ಮನೆಯ ಮುಂದೆ ದೊಡ್ಡ ಜಾತ್ರೆಯೇ ನೆರೆದಿದೆ ಎಂದು ವೀರಮಣಿ ಕಣ್ಣೀರು ಸುರಿಸಿದ್ದಾರೆ.

ಊರು ಬಿಡುವ ನಿರ್ಧಾರಕ್ಕೆ ಬಂದ ವೀರಮಣಿ!

ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದ ವೀರಮಣಿ, ಕೈಮುಗಿದು ಗೋಳಾಡಿದ್ದಾರೆ. "ದಯವಿಟ್ಟು ಈ ಹುಚ್ಚಾಟ ನಿಲ್ಲಿಸಿ. ನಾನೊಬ್ಬ ಸಾಮಾನ್ಯ ವ್ಯಕ್ತಿ, ಇಷ್ಟೊಂದು ಲಕ್ಷಾಂತರ ರೂಪಾಯಿ ಕೊಟ್ಟು ಈ ವಸ್ತುಗಳನ್ನು ಕೊಳ್ಳುವ ಶಕ್ತಿ ನನಗಿಲ್ಲ. ಪಾಪ, ಡೆಲಿವರಿ ಹುಡುಗರು ಎಷ್ಟೋ ದೂರದಿಂದ ಕಷ್ಟಪಟ್ಟು ಬರುತ್ತಿದ್ದಾರೆ, ಅವರ ಹೊಟ್ಟೆಯ ಮೇಲೆ ಹೊಡೆಯಬೇಡಿ. ನನ್ನ ತಪ್ಪಿಗೆ ಕೈಮುಗಿದು ಕ್ಷಮೆ ಕೇಳ್ತೀನಿ" ಎಂದು ಅಂಗಲಾಚಿದ್ದಾರೆ.

ಆದರೂ ನೆಟ್ಟಿಗರ ಸತಾಯಿಸುವಿಕೆ ನಿಲ್ಲದ ಕಾರಣ, ಕೊನೆಗೆ ತಾಳಲಾರದೆ ವೀರಮಣಿ ಮತ್ತೊಂದು ವಿಡಿಯೋ ಮಾಡಿ, "ಲಕ್ಷಾಂತರ ರೂಪಾಯಿ ಸಾಲದ ಬಿಲ್ ಹಿಡಿದು ಜನ ನನ್ನನ್ನು ಹುಡುಕಿಕೊಂಡು ಬಂದು ಬೈಯುತ್ತಿದ್ದಾರೆ. ಈ ಮಾನಸಿಕ ಹಿಂಸೆ ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ, ನಾನು ಊರನ್ನೇ ಬಿಟ್ಟು ಹೋಗುತ್ತಿದ್ದೇನೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).