ನ್ಯೂಸ್

ನಾಲ್ಕು ಬಾರಿ ರೇಪ್​... ಸಾಯುವ ಮುನ್ನ ಪೊಲೀಸ್​ ಅಧಿಕಾರಿ ಕೊಟ್ಟ ಚಿತ್ರಹಿಂಸೆ ಬಿಚ್ಚಿಟ್ಟ ಯುವ ವೈದ್ಯೆ! Woman Doctor

ಮುಂಬೈ: ಯುವ ವೈದ್ಯೆಯೊಬ್ಬರು ( Woman Doctor ) ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿರುವ ವೈದ್ಯೆ, ತನ್ನ ಮೇಲೆ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಐದು ತಿಂಗಳಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸತಾರಾ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವ ವೈದ್ಯೆ ಗುರುವಾರ (ಅ.263) ರಾತ್ರಿ ಸಾವಿಗೆ ಶರಣಾಗಿದ್ದಾಳೆ. ತನ್ನ ಎಡ ಅಂಗೈಯಲ್ಲಿ ಡೆತ್​ನೋಟ್​ ಬರೆದಿರುವ ಸಂತ್ರಸ್ತೆ, ಎಸ್​ಐ ಗೋಪಾಲ್​ ಬಾದ್ನೆ ಎಂಬುವರ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ. ಅಲ್ಲದೆ, ಆತನ ನಿರಂತರ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಸ್​ಐ ಬಾದ್ನೆ ಅವರನ್ನು ಇದೀಗ ಅಮಾನತು ಮಾಡಲಾಗಿದೆ. ಅದೇ ಡೆತ್​ನೋಟ್​ನಲ್ಲಿ ಪೊಲೀಸ್​ ಅಧಿಕಾರಿ ಪ್ರಶಾಂತ್​ ಬಂಕರ್​ ವಿರುದ್ಧವೂ ಮಾನಸಿಕ ಕಿರುಕುಳ ಆರೋಪವನ್ನು ಸಂತ್ರಸ್ತೆ ಹೊರಿಸಿದ್ದಾರೆ.

ಸಂತ್ರಸ್ತೆಯು ಸತಾರ ಜಿಲ್ಲೆಯ ಫಾಲ್ಟನ್ ಪಟ್ಟಣದ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 19 ರಂದು ಫಾಲ್ಟನ್ ಉಪ-ವಿಭಾಗೀಯ ಕಚೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ)ಗೆ ಬರೆದ ಪತ್ರದಲ್ಲಿ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಫಾಲ್ಟನ್ ಗ್ರಾಮೀಣ ಪೊಲೀಸ್ ಇಲಾಖೆಯ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಿರುಕುಳದ ಆರೋಪ ಹೊರಿಸಿ, ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿಎಸ್ಪಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು.

ಡಿಎಸ್ಪಿಗೆ ಬರೆದ ಪತ್ರದಲ್ಲಿ ಎಸ್​ಐ ಗೋಪಾಲ್​ ಬಾದ್ನೆ, ಉಪ-ವಿಭಾಗೀಯ ಪೊಲೀಸ್ ಇನ್ಸ್‌ಪೆಕ್ಟರ್ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಲಾಡ್‌ಪುತ್ರೆ ಅವರ ಹೆಸರನ್ನು ಸಂತ್ರಸ್ತೆ ಬರೆದಿದ್ದರು. ತಾನು ತೀವ್ರ ಒತ್ತಡದಲ್ಲಿರುವುದಾಗಿ ಮತ್ತು ಈ ವಿಷಯದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ವಿನಂತಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ವೈದ್ಯೆ ಸಾವಿಗೆ ಶರಣಾಗಿದ್ದು, ಈ ಪ್ರಕರಣ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಆದೇಶದ ಮೇರೆಗೆ ಎಸ್​ಐ ಬಾದ್ನೆ ಅವರನ್ನು ಅಮಾನತು ಮಾಡಲಾಗಿದೆ. ಇದರ ನಡುವೆ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಡೆತ್​ನೋಟ್​ ಬಹಿರಂಗವಾದ ಬೆನ್ನಲ್ಲೇ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿವೆ.

ರಕ್ಷಕನು ಪರಭಕ್ಷಕನಾದಾಗ... ಪೊಲೀಸರ ಕರ್ತವ್ಯ ಏನೆಂದರೆ ಜನರಿಗೆ ರಕ್ಷಣೆ ನೀಡುವುದು. ಆದರೆ, ಅವರೇ ಮಹಿಳಾ ವೈದ್ಯರನ್ನು ಶೋಷಿಸುತ್ತಿದ್ದರೆ, ನ್ಯಾಯ ತಾನೇ ಹೇಗೆ ಸಿಗುತ್ತದೆ? ಈ ಹುಡುಗಿ ಈ ಹಿಂದೆಯೇ ದೂರು ನೀಡಿದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಏಕೆ? ಈ ಮಹಾಯುತಿ ಸರ್ಕಾರವು ಪೊಲೀಸರನ್ನು ಪದೇಪದೆ ರಕ್ಷಣೆ ಮಾಡುತ್ತಿದೆ. ಸರ್ಕಾರದ ಈ ನಡೆ ಪೊಲೀಸ್ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಕೇವಲ ತನಿಖೆಗೆ ಆದೇಶಿಸಿದರೆ ಸಾಲದು. ಆರೋಪ ಕೇಳಿಬಂದಿರುವ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಅವರು ತನಿಖೆಯ ಮೇಲೆ ಒತ್ತಡ ಹೇರಬಹುದು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ, ಪೊಲೀಸ್ ದೌರ್ಜನ್ಯವನ್ನು ತಡೆಯಲು ಸಾಧ್ಯವಿಲ್ಲ ಎಂದು ನಾಮದೇವರಾವ್ ವಡೆಟ್ಟಿವಾರ್ ಹೇಳಿದ್ದಾರೆ.

ಈ ಘಟನೆ ನಡೆದಿರುವುದು ದುರಾದೃಷ್ಟಕರ. ನಾನು ಸತಾರ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಮತ್ತು ಪ್ರಥಮ ಮಾಹಿತಿ ವರದಿ (ಎಫ್​ಐಆರ್​) ಅನ್ನು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳಲ್ಲಿ ಒಬ್ಬ ಸತಾರದ ಹೊರಗಿದ್ದು, ಆತನನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಮತ್ತು ರಾಜ್ಯ ಮಹಿಳಾ ಅಧ್ಯಕ್ಷೆ ಚಿತ್ರಾ ವಾಘ್ ಹೇಳಿದ್ದಾರೆ.

ಸದ್ಯ ಈ ಘಟನೆ ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇದರ ನಡುವೆ ಯುವ ವೈದ್ಯೆಯ ಸಾವಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)