ವಾರಂಗಲ್: ತೆಲಂಗಾಣದ ದಮೇರಾ ಮಂಡಲದಲ್ಲಿರುವ ಪೇಸರಗೊಂಡ ರಸ್ತೆಯಲ್ಲಿ ಬುಧವಾರ ಕಾರು ಮತ್ತು ಮರಳಿನ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮರಳಿನ ಲಾರಿ ಕಲೆಶ್ವರಂನಿಂದ ವಾರಂಗಲ್ ಕಡೆಗೆ ತೆರಳುತ್ತಿತ್ತು. ಕಾರು ವಾರಂಗಲ್ನಿಂದ ಪರ್ಕಲ್ಗೆ ಪ್ರಯಾಣ ಬೆಳೆಸಿತ್ತು. ವಾರಂಗಲ್ನಲ್ಲಿ ಬರ್ತಡೇ ಪಾರ್ಟಿಯನ್ನು ಮುಗಿಸಿದ ಯುವಕರು ಪರ್ಕಲ್ಗೆ ಮರಳುವಾಗ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಕಾರು ಬೇರೊಂದು ವಾಹನವನ್ನು ಓವರ್ಟೇಕ್ ಮಾಡಲು ಹೋಗಿ ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಮೃತರಾದ ಐವರು ಯುವಕರನ್ನು ಪವನ್, ರಾಕೇಶ್, ಚಂದು, ರೋಹಿತ್ ಮತ್ತು ಸಬೀರ್ ಎಂದು ಗುರುತಿಸಲಾಗಿದೆ.
ಕಾರಿನ ಬಾನೆಟ್ ಸಂಪೂರ್ಣ ನುಜ್ಜುಗುಜ್ಜಾಗಿರುವುದರಿಂದ ಅಪಾಯದಿಂದ ಯುವಕರು ಪಾರಾಗುವ ಯಾವುದೇ ಅವಕಾಶವೂ ದೊರೆತಿಲ್ಲ. ಬುಧವಾರ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಮೃತ ಯುವಕರೆಲ್ಲ ಬೇರೆ ಬೇರೆ ಕುಟುಂಬದವರು. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. (ಏಜೆನ್ಸೀಸ್)