ಬೆಂಗಳೂರು: ವಕ್ಪ್ ಆಸ್ತಿ ದುರ್ಬಳಕೆ ಕುರಿತಂತೆ ಲೋಕಾಯುಕ್ತ ತನಿಖೆಯ ಮಧ್ಯಂತರ ವರದಿಯನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಾಜ್ಯ ವಕ್ಪ್ ಮಂಡಳಿ ಮತ್ತು ಜವಳಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಸಚಿವರಿಗೆ ಈ ಸೂಚನೆ ನೀಡಿದ್ದಾರೆ.
ವಕ್ಪ್ ಆಸ್ತಿಗಳ ದುರ್ಬಳಕೆ, ಒತ್ತುವರಿ ಬಗ್ಗೆ ಅನ್ವರ್ ಮಾಣಿಪ್ಪಾಡಿ ವರದಿಯನ್ವಯ ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಲೋಕಾಯುಕ್ತರು ಮಧ್ಯಂತರ ವರದಿ ಸಲ್ಲಿಸಿದ್ದು, ಅದನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಅನುಮೋದಿಸಿದೆ. ಹೀಗಾಗಿ ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸುವಂತೆ ಸಿಎಂ ತಿಳಿಸಿದರು.
ಹಜ್ ಯಾತ್ರೆ ಡೌಟ್? ಕರೊನಾ ಹಿನ್ನೆಲೆಯಲ್ಲಿ ಹಜ್ ಯಾತ್ರೆ ಕುರಿತು ಸೌದಿ ಅರೇಬಿಯಾದಿಂದ ಯಾವುದೇ ಮಾಹಿತಿ ಸ್ವೀಕೃತಿಯಾಗಿಲ್ಲ. ಹೀಗಾಗಿ 2020ರ ಯಾತ್ರೆಗೆ ಆಯ್ಕೆಯಾದವರು ತಮ್ಮ ಮುಂಗಡ ಹಣ ಹಿಂಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.
ನೇಕಾರ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷದ 2000 ರೂ. ಆರ್ಥಿಕ ನೆರವಿಗಾಗಿ ಆನ್ಲೈನ್ನಲ್ಲಿ 18991 ಅರ್ಜಿಗಳು ಸ್ವೀಕೃತವಾಗಿದ್ದು, ಶೀಘ್ರವೇ ನೇಕಾರರಿಗೆ ನೆರವು ತಲುಪಿಸುವಂತೆ ಹಾಗೂ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮೂವರು ನೇಕಾರರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳು ಸೂಚಿಸಿದರು.
ಉಚಿತ ಸೀರೆ: ಲಾಕ್ಡೌನ್ನಿಂದಾಗಿ ಮಾರಾಟವಾಗದೆ ಉಳಿದಿರುವ ವಿದ್ಯುತ್ ಮಗ್ಗದ ಸೀರೆಗಳ ದಾಸ್ತಾನು ಖರೀದಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ವಿತರಿಸುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಬೇಡಿ: ಆರ್ಥಿಕ ಸಮಸ್ಯೆ ಇದ್ದಾಗ್ಯೂ ವಿದ್ಯಾರ್ಥಿವೇತನ ಸ್ಥಗಿತಗೊಳಿಸದಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಿಎಸ್ವೈಗೆ, ಇಲಾಖಾ ಕಾರ್ಯಕ್ರಮ ಅನುಷ್ಠಾನದಲ್ಲಿ 2019-20ನೇ ಸಾಲಿನಲ್ಲಿ ಶೇ.97 ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇಲಾಖೆಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾಪೂರ್ವ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಒಟ್ಟು 268 ಮಂದಿ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ವಿವಿಧ ಸೇವೆಗಳಿಗೆ ಸೇರಿದ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.