ನ್ಯೂಸ್

ಈಡನ್​ ಗಾರ್ಡನ್ ಕ್ರಿಕೆಟ್​ ಸ್ಟೇಡಿಯಂ​ ವಕ್ಫ್​ ಆಸ್ತಿ ಎಂದ ಎಐಎಂಐಎಂ ನಾಯಕ ಇಮ್ರಾನ್ ಸೋಲಂಕಿ! Waqf

Waqf : ವಕ್ಫ್​ ಮಸೂದೆ ದೇಶಾದ್ಯಂತ ಸಂಚಲನ ಮೂಡಿಸಿರುವುದು ಗೊತ್ತೇ ಇದೆ. ಕೇಂದ್ರ ಸರ್ಕಾರ ತಿದ್ದುಪಡಿಗಳೊಂದಿಗೆ ಹೊಸ ಮಸೂದೆ ತಂದಿದ್ದು, ವಕ್ಫ್ ಮಂಡಳಿಯ ಅನಿಯಮಿತ ಅಧಿಕಾರವನ್ನು ಮೊಟಕುಗೊಳಿಸಿದೆ. ಇದಕ್ಕೆ ವಿರೋಧ ಪಕ್ಷದ ಆಕ್ಷೇಪಣೆಯಿಂದಾಗಿ ಜಂಟಿ ಸಂಸದೀಯ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ಮುಂದಿನ ಸೋಮವಾರದಿಂದ ಆರಂಭವಾಗುವ ಎರಡನೇ ಅವಧಿಯ ಬಜೆಟ್ ಅಧಿವೇಶನದಲ್ಲಿ ವಕ್ಫ್ ಮಸೂದೆ ಸದನದ ಮುಂದೆ ಬರುವ ಸಾಧ್ಯತೆ ಇದೆ.

ಆದಾಗ್ಯೂ, ಎಐಎಂಐಎಂ ನಾಯಕ ಇಮ್ರಾನ್ ಸೋಲಂಕಿ ಇತ್ತೀಚೆಗೆ ನೀಡಿದ ಕೆಲವು ಹೇಳಿಕೆಗಳು ಸಂಚಲನ ಮೂಡಿಸಿವೆ. ಕೊಲ್ಕತ್ತಾದ "ಈಡನ್ ಗಾರ್ಡನ್" ಕ್ರಿಕೆಟ್ ಕ್ರೀಡಾಂಗಣವೂ ವಕ್ಫ್ ಆಸ್ತಿ ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಪ್ರಧಾನ ಕಚೇರಿಯಾದ ಫೋರ್ಟ್ ವಿಲಿಯಂ ಕೂಡ ವಕ್ಫ್ ಆಸ್ತಿಯಂತೆ. ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನಲ್ಲಿ ವಕ್ಫ್ 105 ಆಸ್ತಿಗಳನ್ನು ಹೊಂದಿದೆ ಎಂದು ಇಮ್ರಾನ್ ಹೇಳಿದ್ದಾರೆ. ಈಗ ಈ ಹೇಳಿಕೆಗಳು ವಿವಾದಾತ್ಮಕವಾಗಿವೆ.

ಈ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರ ಬಾಡಿಗೆ ಪಾವತಿಸುತ್ತಿದೆ ಎಂದು ಇಮ್ರಾನ್​ ಹೇಳಿದರು. ಅಲ್ಲದೆ, ಬಂಗಾಳದಲ್ಲಿ ಅತಿ ಹೆಚ್ಚು ವಕ್ಫ್ ಭೂಮಿ ಇದೆ ಅಂತಾನೂ ಸೋಲಂಕಿ ಹೇಳಿದರು. ಈಡನ್ ಗಾರ್ಡನ್ ಭೂಮಿ ಸೇರಿದಂತೆ 8000 ಸ್ಥಳಗಳಲ್ಲಿ ವಕ್ಫ್ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂದು ಹೇಳಿದರು.

ಇಮ್ರಾನ್​ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಹೋದರೆ ಮುಂದೊಂದು ದಿನ ಪಶ್ಚಿಮ ಬಂಗಾಳ ನಮ್ಮದು ಅಂತಾರೆ, ಅಷ್ಟೇ ಅಲ್ಲ ಭಾರತವೇ ನಮ್ಮ ಆಸ್ತಿ ಎಂದು ಹೇಳಿದರು ಆಶ್ಚರ್ಯವಿಲ್ಲ ಎಂದು ಅನೇಕರು ಕಾಮೆಂಟ್​ ಮೂಲಕ ಇಮ್ರಾನ್​ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. (ಏಜೆನ್ಸೀಸ್​)