ನ್ಯೂಸ್

ದಲಿತರು, ದುರ್ಬಲ ವರ್ಗದವರನ್ನು ನಾಯಕತ್ವ ಸ್ಥಾನದಲ್ಲಿ ನೋಡಲು ಎದುರು ನೋಡುತ್ತಿದ್ಧೇನೆ: Rahul Gandhi

ಪಟ್ನಾ: ಭಾರತದ ಪ್ರತಿಯೊಂದು ಸಂಸ್ಥೆಯಲ್ಲೂ ದಲಿತರು, ದುರ್ಬಲ ವರ್ಗದವರು ನಾಯಕತ್ವ ಸ್ಥಾನವನ್ನು ಅಲಂಕರಿಸುವುದನ್ನು ನೋಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್​ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ದಲಿತ ನಾಯಕ ಜಗ್​ಲಾಲ್​​ ಚೌಧರಿ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಬಿಜೆಪಿ, ಆರ್​ಎಸ್​ಎಸ್​, ದಲಿತರು ಮತ್ತು ದುರ್ಬಲ ವರ್ಗದವರಿಗೆ ಹಕ್ಕುಗಳನ್ನು ನೀಡುವ ಸಂವಿಧಾನದ ವಿರುದ್ಧವಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾರತದ ಪ್ರತಿಯೊಂದು ಸಂಸ್ಥೆಯಲ್ಲೂ ದಲಿತರು ಮತ್ತು ದುರ್ಬಲ ವರ್ಗದವರು ನಾಯಕತ್ವ ಸ್ಥಾನ ಪಡೆದುಕೊಳ್ಳುವುದನ್ನು ನೋಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ದೇಶದ ಪ್ರಸ್ತುತ ಅಧಿಕಾರ ವರ್ಗದಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತರು ಮತ್ತು ಬಡವರ್ಗಗಳ ಭಾಗವಹಿಸುವಿಕೆ ಇಲ್ಲ. ದಲಿತರು, ಅಲ್ಪಸಂಖ್ಯಾತರು ಮತ್ತು ಸಮಾಜದ ದುರ್ಬಲ ವರ್ಗಗಳ ನಿಖರವಾದ ಸಂಖ್ಯೆಯನ್ನು ಗುರುತಿಸಲು ಭಾರತದಾದ್ಯಂತ ಜಾತಿ ಗಣತಿಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಮುಂದಿನ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರಕ್ಕೆ ರಾಹುಲ್​ ಗಾಂಧಿ ಎರಡನೇ ಬಾರಿ ಭೇಟಿ ನೀಡುತ್ತಿದ್ದು, ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಜನವರಿ 18ರಂದು ಸಂವಿಧಾನ್ ಸುರಕ್ಷಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಜಾತಿಗಣತಿಯ ಅಗತ್ಯತೆಯ ಬಗ್ಗೆ ಹೇಳಿದ್ದರು. ಇದೀಗ ಮತ್ತೊಮ್ಮೆ ಜಾತಿಗಣತಿಯ ಅಗತ್ಯತೆಯ ಬಗ್ಗೆ ರಾಹುಲ್​ ಗಾಂಧಿ (Rahul Gandhi) ಪುನರುಚ್ಛರಿಸಿದ್ದಾರೆ.