ಬೆಂಗಳೂರು: ಮಾಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ದೈಹಿಕವಾಗಿ ಇಂದು ಇಲ್ಲವಾದರೂ, ಮಾನಸಿಕವಾಗಿ ಜಗತ್ತನ್ನು ಆವರಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳಿದ್ದಾರೆ.
ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧೀವಾದಿ ಡಬ್ಲ್ಯು.ಎಚ್.ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಗಾಂಧಿ ಮತ್ತು ಅಂಬೇಡ್ಕರ್ ಪ್ರಸ್ತುತತೆ' ವಿಷಯದ ಕುರಿತು ಮಾತನಾಡಿದರು.
ಸಾಕಷ್ಟು ವಿಚಾರಗಳಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯ ಇತ್ತು. ಆದರೆ ದ್ವೇಷ ಭಾವನೆ ಇರಲಿಲ್ಲ. ಈ ಮನಸ್ಥಿತಿಯನ್ನು ಇಂದಿನ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.
ಗಾಂಧೀಜಿ ಮೇಲ್ವರ್ಗದ ಸಮುದಾಯದಿಂದ ಸ್ವಾತಂತ್ರ್ಯಕ್ಕಾಗಿ ತಳಮಟ್ಟದಲ್ಲಿ ಹೋರಾಡಿದರು. ಅಂಬೇಡ್ಕರ್ ಕೆಳವರ್ಗದಿಂದ ಬಂದು ತಮ್ಮ, ಜನರಿಗಾಗಿ ಮೇಲ್ಮಟ್ಟದಲ್ಲಿ ಹೋರಾಟ ನಡೆಸಿದರು. ಹೋರಾಟದ ದಾರಿ ಬೇರೆ ಬೇರೆಯಾಗಿದ್ದರೂ, ಇಬ್ಬರಲ್ಲೂ ಮಾನವೀಯತೆ ಹಾಗೂ ಅಚಲ ವಿಶ್ವಾಸ ಇತ್ತು. ರಾಜಕೀಯ ಹೋರಾಟಕ್ಕಿಂತಲೂ ಸಾಮಾಜಿಕ ಹೋರಾಟ ಮುಖ್ಯ ಎಂಬುದನ್ನು ಅಂಬೇಡ್ಕರ್ ಅರಿತುಕೊಂಡಿದ್ದರು. ಇವರಿಬ್ಬರ ದೃಷ್ಟಿಕೋನದಿಂದ ನೋಡಿದಾಗ ಭಾರತ ಏನೆಂಬುದು ಅರ್ಥವಾಗುತ್ತದೆ.
ಗಾಂಧೀಜಿ ಮುಂಚೂಣಿಯಲ್ಲಿದ್ದುಕೊಂಡು ಸ್ವಾತಂತ್ರ್ಯ ತಂದುಕೊಟ್ಟರು. ಅಂಬೇಡ್ಕರ್ ಸಂವಿಧಾನ ತಂದರು. ಇಬ್ಬರು ಮಹಾನ್ ನಾಯಕರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಇಂದಿಗೂ ಜಾತಿ ಪದ್ಧತಿ, ಅಸಮಾನತೆ, ಅಸ್ಪೃಷ್ಯತೆ, ಮಹಿಳಾ ಶೋಷಣೆ ನಮ್ಮ ಸಮಾಜದ ಕೆಲ ಭಾಗಗಳಲ್ಲಿ ಉಳಿದುಕೊಂಡಿದೆ. ಇವೆಲ್ಲವೂ ಸಂಪೂರ್ಣವಾಗಿ ನಶಿಸುವಲ್ಲಿ ತನಕ ಗಾಂಧೀಜಿ ಹಾಗೂ ಅಂಬೇಡ್ಕರ್ ಪ್ರಸ್ತುತ ಆಗುತ್ತಲೇ ಇರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ, ದತ್ತಿ ದಾನಿಗಳ ಪ್ರತಿನಿಧಿ ಡಬ್ಲ್ಯು.ಡಿ.ಅಶೋಕ್, ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ ಮತ್ತಿತರರಿದ್ದರು.