ನ್ಯೂಸ್

ರಸ್ತೆ ಬದಿಯಲ್ಲಿ ವಿವಿಪ್ಯಾಟ್ ಸ್ಲಿಪ್‌!; ಕಳ್ಳ ಆಯೋಗ ಇದಕ್ಕೆ ಉತ್ತರ ನೀಡಬಹುದೇ? ಎಂದು ಆರ್​ಜೆಡಿ ಟೀಕೆ | VVPAT Slips

ಪಾಟ್ನಾ: ಬಿಹಾರದ ಸಮಷ್ಟಿಪುರ ಜಿಲ್ಲೆಯ, ಸರೈರಂಜನ್ ವಿಧಾನಸಭಾ ಕ್ಷೇತ್ರದ ಕಾಲೇಜು ಬಳಿಯ ರಸ್ತೆಬದಿಯಲ್ಲಿ ಹೆಚ್ಚಿನ ಸಂಖ್ಯೆಯ ವಿವಿಪ್ಯಾಟ್ ಸ್ಲಿಪ್‌ಗಳು(VVPAT Slips) ಪತ್ತೆಯಾದ ಬಳಿಕ ಸಹಾಯಕ ಚುನಾವಣಾ ಅಧಿಕಾರಿಯನ್ನು ಶನಿವಾರ (ನ 8) ಅಮಾನತುಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇದರದ್ದೇ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸುವಂತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚನೆ ನೀಡಿದೆ.

ಇವು ಅಣಕು ಸಮೀಕ್ಷೆಯ VVPAT ಸ್ಲಿಪ್‌ಗಳಾಗಿರುವುದರಿಂದ, ಮತದಾನ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ರಾಜಿಯಾಗದೆ ಉಳಿದಿದೆ. ಸ್ಪರ್ಧಿಸುವ ಅಭ್ಯರ್ಥಿಗಳಿಗೂ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರು, ನಿರ್ಲಕ್ಷ್ಯಕ್ಕಾಗಿ ARO ಅವರನ್ನು ಕೂಡಲೇ ಅಮಾನತುಗೊಳಿಸಲಾಗುತ್ತಿದೆ ಮತ್ತು FIR ದಾಖಲಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.

ಆರ್​​ಜೆಡಿ ಟೀಕೆ.............

ಈ ಘಟನೆಯ ಕುರಿಯಾಗಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ವಿಪಕ್ಷ ಆರ್‌ಜೆಡಿ, ಸಮಸ್ತಿಪುರದ ಸರೈರಂಜನ್ ವಿಧಾನಸಭಾ ಕ್ಷೇತ್ರದ ಕೆಎಸ್ಆರ್ ಕಾಲೇಜು ಬಳಿ ಇವಿಎಂಗಳಿಂದ, ವಿವಿಪ್ಯಾಟ್ ಸ್ಲಿಪ್‌ಗಳು ಕಂಡುಬಂದಿವೆ. ಈ ಸ್ಲಿಪ್‌ಗಳನ್ನು ಯಾವಾಗ, ಹೇಗೆ ಮತ್ತು ಯಾರ ನಿರ್ದೇಶನದ ಪ್ರಕಾರ ಎಸೆಯಲಾಗಿದೆ..? ಕಳ್ಳ ಆಯೋಗ ಇದಕ್ಕೆ ಉತ್ತರ ನೀಡಬಹುದೇ? ಬೇರೆ ಕಡೆಯಿಂದ ಬಂದು ಬಿಹಾರದಲ್ಲಿ ಬೀಡುಬಿಟ್ಟಿರುವ ಪ್ರಜಾಪ್ರಭುತ್ವದ ಡಕಾಯಿತರ ಸೂಚನೆಯ ಮೇರೆಗೆ ಇದೆಲ್ಲವೂ ನಡೆಯುತ್ತಿದೆಯೇ?" ಎಂದು ಬರೆದುಕೊಂಡಿದೆ.

ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.(ಏಜೆನ್ಸೀಸ್​)