ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ವಿಷ ಅನಿಲ ದುರಂತದ ಬೆನ್ನಲ್ಲೇ ರಾಜ್ಯದಲ್ಲೂ ಎಲ್ಲ ಕಾರ್ಖಾನೆಗಳಲ್ಲೂ ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಿಶಾಖಪಟ್ಟಣದ ವಿಷಾನಿಲ ಸೋರಿಕೆ ದುರಂತ ಘಟನೆ ದುರದೃಷ್ಟಕರ. ಇಂಥ ಘಟನೆ ಎಲ್ಲಿಯೂ ನಡೆಯಬಾರದು. ನಮ್ಮ ರಾಜ್ಯದಲ್ಲೂ ಎರಡು ತಿಂಗಳುಗಳ ನಂತರ ಕೈಗಾರಿಕೆಗಳು ಪ್ರಾರಂಭ ಆಗುತ್ತಿದೆ. ಸಂಬಂಧಪಟ್ಟ ಫ್ಯಾಕ್ಟರಿ, ಕಂಪನಿಗಳ ವ್ಯವಸ್ಥಾಪಕರು ಎಚ್ಚರಿಕೆಯಿಂದ ಇರಬೇಕು. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಳಿಕವೇ ಕೈಗಾರಿಕೆಗಳನ್ನು ಶುರು ಮಾಡಬೇಕು ಎಂದು ಹೇಳಿದ್ದಾರೆ.
ಎಲ್ಲ ಕೆಮಿಕಲ್ ಫ್ಯಾಕ್ಟರಿಗಳ ಮೇಲೆ ನಿಗಾ
ಇನ್ನು ಈ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಆಂಧ್ರದಲ್ಲಿ ಗ್ಯಾಸ್ ಲೀಕ್ ಅವಘಡ ನಡೆದ ಬೆನ್ನಲ್ಲೇ, ನಮ್ಮ ರಾಜ್ಯದಲ್ಲೂ ಎಲ್ಲ ರಾಸಾಯನಿಕ ಕಾರ್ಖಾನೆಗಳ ಮೇಲೆ ನಿಗಾ ಇಡಲಾಗಿದೆ. ಪೊಲೀಸ್ ಮತ್ತು ಅಗ್ನಿಶಾಮಕ ದಳವನ್ನು ಅಲರ್ಟ್ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಂಥ ದುರ್ಘಟಣೆ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)