ನ್ಯೂಸ್

ನಾನಾ ಪಾಟೇಕರ್​ಗೆ ಮುಖ್ಯ ಪಾತ್ರ ಕೊಟ್ಟಿದ್ಯಾಕೆ?; ಅಸಲಿ ಕಾರಣ ತಿಳಿಸಿದ 'ದಿ ವ್ಯಾಕ್ಸಿನ್ ವಾರ್' ನಿರ್ದೇಶಕ

ಮುಂಬೈ: ಬಾಲಿವುಡ್​ ಅಂಗಳದಲ್ಲಿ ತಮ್ಮ ನಿರ್ದೇಶನ ಮತ್ತು ಕಥೆ ಹೇಳುವ ಶೈಲಿಗೆ ಹೆಸರುವಾಸಿಯಾದ 'ದಿ ಕಾಶ್ಮೀರ್​ ಫೈಲ್ಸ್'​ ಖ್ಯಾತಿಯ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇದೀಗ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್​ 'ದಿ ವ್ಯಾಕ್ಸಿನ್​ ವಾರ್'​ ಚಿತ್ರದ ಟ್ರೇಲರ್​ ಅನಾವರಣಗೊಳಿಸುವ ಮುಖೇನ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

ಮಂಗಳವಾರ 'ದಿ ವ್ಯಾಕ್ಸಿನ್ ವಾರ್' ಚಿತ್ರದ ಟ್ರೇಲರ್​ ಬಿಡುಗಡೆಗೊಳಿಸಿದ ಚಿತ್ರತಂಡಕ್ಕೆ ವ್ಯಾಪಕ ಮೆಚ್ಚುಗೆ ಜತೆಗೆ ಭಾರೀ ಪ್ರಶ್ನೆಗಳು ಹರಿದುಬಂದಿದ್ದು, ಸಿನಿಮಾದ ರಿಯಲ್​ ಕಥೆ, ಪಾತ್ರಗಳ ಕುರಿತಂತೆ ಸಾಕಷ್ಟು ಅಭಿಪ್ರಾಯಗಳು ಕೂಡ ವ್ಯಕ್ತಗೊಂಡಿವೆ. ಇತ್ತೀಚೆಗಷ್ಟೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾನಾ ಪಾಟೇಕರ್​ ಪಾತ್ರದ ಆಯ್ಕೆ ಹೇಗೆ? ಎಂಬ ಪ್ರಶ್ನೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೊಟ್ಟ ಉತ್ತರ ಹೀಗಿದೆ.

ಸಿನಿಮಾದಲ್ಲಿ ಐಸಿಎಂಆರ್ ಮಾಜಿ ಡೈರೆಕ್ಟರ್ ಜನರಲ್ ಬಲರಾಮ್ ಭಾರ್ಗವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ನಾನಾ ಪಾಟೇಕರ್​ ರೋಲ್​ ಬಗ್ಗೆ ಅಸಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ, "ತಮ್ಮ ಪಾತ್ರಕ್ಕೆ ಹೃದಯದಿಂದ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಲು ನೋಡುತ್ತಿದ್ದೆವು, ಆಗ ನನಗೆ ಆಳವಾಗಿ ಕುಳಿತ್ತಿದ್ದು ಪಾಟೇಕರ್​. ತಮ್ಮ ಇಡೀ ವೃತ್ತಿಯಲ್ಲಿ ನೆಗೆಟಿವ್​ ರೋಲ್​ ಮಾಡದ ಏಕೈಕ ನಟ ಅವರು, ಹೀಗಾಗಿ ಅವರನ್ನು ನಮ್ಮ ಚಿತ್ರದ ಪಾತ್ರಕ್ಕಾಗಿ ನೇರವಾಗಿ ಕೇಳಿದೆ. ಅದಕ್ಕೆ ನಾನಾ ಒಪ್ಪಿಗೆ ಕೂಡ ಸೂಚಿಸಿದರು" ಎಂದು ಹೇಳಿದರು.

ಸದ್ಯ ಟ್ರೇಲರ್​ ಬಿಡುಗಡೆಗೊಳಿಸುವ ಮುಖೇನ ಸಿನಿಪ್ರೇಕ್ಷಕರ ಗಮನ ಸೆಳೆದ 'ದಿ ವ್ಯಾಕ್ಸಿನ್ ವಾರ್​' ಚಿತ್ರವು, ಇದೇ ಸೆಪ್ಟಂಬರ್​ 28 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ,(ಏಜೆನ್ಸೀಸ್).