ನ್ಯೂಸ್

ವೆಡ್ಡಿಂಗ್​ ಫೋಟೋಶೂಟ್​ ವೇಳೆ ಕೆರಳಿದ ಆನೆ: ಮಾವುತ ಬಚಾವ್​ ಆಗಿದ್ದೇ ರೋಚಕ, ವಿಡಿಯೋ ವೈರಲ್​

ಗುರುವಾಯೂರು: ಆನೆಯ ಮುಂದೆ ನಿಂತು ವೆಡ್ಡಿಂಗ್​ ಫೋಟೋಶೂಟ್​ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೆರಳಿದ ಆನೆ ಮಾವುತನ ಮೇಲೆ ಅಟ್ಟಹಾಸ ಮೆರೆದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ನವೆಂಬರ್​ 10ರಂದು ಬೆಳಗ್ಗೆ ದೇವಸ್ಥಾನ ದಕ್ಷಿಣ ದ್ವಾರದ ಬಳಿ ನಡೆದಿದೆ. ಆನೆಯ ಹೆಸರು ದಾಮೋದರ್​ ದಾಸ್​. ದೇವಸ್ಥಾನದ ಮೆರವಣಿಗೆಯ ಬಳಿಕ ಆನೆಯನ್ನು ಮರಳಿ ಕರೆತರಲಾಗುತ್ತಿತ್ತು. ಈ ವೇಳೆ ಅನೇಕ ಭಕ್ತರು ಸಹ ಅಲ್ಲಿಯೇ ಇದ್ದರು. ಕ್ಯಾಮೆರಾಮೆನ್​ ನವವಿವಾಹಿತರ ಫೋಟೋಶೂಟ್​ ನಡೆಸುತ್ತಿದ್ದರು.

ಇದ್ದಕ್ಕಿದ್ದಂತೆ ಕೆರಳಿದ ಆನೆ ಮೊದಲು ಮಾವುತನನ್ನು ಕೆಳಗೆ ಕೆಡವಿ, ದಂತದಿಂದ ಆತನನ್ನು ಮೇಲಕ್ಕೆ ಎತ್ತಿ ಬೀಸಾಡಿತು. ಮಾವುತನ ಅದೃಷ್ಟ ಚೆನ್ನಾಗಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾನೆ. ಆನೆಯ ಮೇಲೆ ಕುಳಿತ ಮತ್ತೊಬ್ಬ ಮಾವುತ ಆನೆಯನ್ನು ಸಮಾಧಾನಪಡಿಸಿದನು.

ಮೊದಲ ಮಾವುತ ಎ.ವಿ.ರಾಧಾಕೃಷ್ಣನ್ ಬಚಾವ್​ ಆಗಿದ್ದು ಪವಾಡವೇ ಸರಿ ಎಂದು ನೋಡುಗರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಆನೆಯನ್ನು ಹತೋಟಿಗೆ ತಂದು ದೇವಸ್ಥಾನದ ಆವರಣದಲ್ಲಿರುವ ಮರಕ್ಕೆ ಕಟ್ಟಿ ಹಾಕಲಾಯಿತು. (ಏಜೆನ್ಸೀಸ್​)

ವಿಡಿಯೋ ಕೃಪೆ: ಮಾತೃಭೂಮಿ ಯೂಟ್ಯೂಬ್​ ಚಾನೆಲ್​