ವಿಸ್ತಾರ ಮೀಡಿಯಾ ಪ್ರೖೆ.ಲಿ. ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ‘ವಿಸ್ತಾರ ಕಾಯಕ ಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿ.ಎಸ್. ಯಡಿಯೂರಪ್ಪ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿ.ಟಿ.ರವಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಸ್ತಾರ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ಧಮೇಶ್, ನಿರ್ದೇಶಕ ಶ್ರೀನಿವಾಸ್ ಎಸ್.ಹೆಬ್ಬಾರ್, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತಿತರರಿದ್ದರು. 
ನ್ಯೂಸ್

ಕನ್ನಡ ನ್ಯೂಸ್ ಚಾನಲ್​ಗಳ ಸಂಖ್ಯೆ ಇನ್ನಷ್ಟು ವಿಸ್ತಾರ; ಡಾ. ವಿಜಯ ಸಂಕೇಶ್ವರರಿಗೆ ಕಾಯಕ ಯೋಗಿ ಪುರಸ್ಕಾರ ಪ್ರದಾನ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ‘ವಿಸ್ತಾರ’ ಕನ್ನಡ ಸುದ್ದಿವಾಹಿನಿ ಭಾನುವಾರ ಆರಂಭವಾಗಿದೆ. ವಿಸ್ತಾರ ಮೀಡಿಯಾ ಪ್ರೖೆ.ಲಿ. ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಫ್ರೀಡಂ ಆಪ್ ಸಂಸ್ಥಾಪಕ ಸಿ.ಎಸ್.ಸುಧೀರ್, ಪಿಇಎಸ್ ಶಿಕ್ಷಣ ಸಂಸ್ಥೆ ಸ್ಥಾಪಕ ಎಂ.ಆರ್.ದೊರೆಸ್ವಾಮಿ ಸೇರಿ ಅನೇಕ ಸಾಧಕರಿಗೆ ‘ವಿಸ್ತಾರ ಕಾಯಕ ಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ನೂತನವಾಗಿ ಪ್ರಸಾರಗೊಳ್ಳುತ್ತಿರುವ ‘ವಿಸ್ತಾರ’ ಸುದ್ದಿವಾಹಿನಿಗೆ ಅಭಿನಂದನೆಗಳು. ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಎಚ್.ವಿ. ಧಮೇಶ್, ವಿಸ್ತಾರ ಮೀಡಿಯಾ ಮುಖೇನ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಈ ಸುದ್ದಿವಾಹಿನಿ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಇವರು ದೊಡ್ಡ ಹೆಸರು ಮಾಡಲಿ. ಮಾಧ್ಯಮ ಲೋಕದಲ್ಲಿ 20 ವರ್ಷ ಅನುಭವ ಹೊಂದಿರುವ ಹಾಗೂ ಸಮಕಾಲೀನ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳ ಹರಿಕಾರರೆಂದು ಹೆಸರಾದ ಹರಿಪ್ರಕಾಶ್ ಕೋಣೆಮನೆಗೆ ಹಾರ್ದಿಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಟ್ಟುವ ಮತ್ತು ಒಡೆಯವ ಎರಡೂ ಸಾಮರ್ಥ್ಯ ಮಾಧ್ಯಮಕ್ಕೆ ಇದೆ. ಸಮಾಜ ಮತ್ತು ದೇಶವನ್ನು ಕಟ್ಟಲು ಹಾಗೂ ಎಲ್ಲರ ನಡುವೆ ಸಹಬಾಳ್ವೆಯನ್ನು ತರುವಂತಹ ದೊಡ್ಡ ಹೊಣೆಗಾರಿಕೆ ವಿದ್ಯುನ್ಮಾನ ಸಂಸ್ಥೆಗಳಿಗೆ ಇದೆ. ಇಂಥ ಜನಪರ ಧ್ಯೇಯ ಇಟ್ಟುಕೊಂಡು ಮಾಧ್ಯಮ ಕ್ಷೇತ್ರದಲ್ಲಿ ಹೊಸದಾಗಿ ವಿಸ್ತಾರ ಸುದ್ದಿವಾಹಿನಿ ಆರಂಭಿಸಿರುವ ವಿಸ್ತಾರ ಮೀಡಿಯಾ ಪ್ರೖೆ.ಲಿ.ಗೆ ಭಗವಂತನ ಅನುಗ್ರಹ ದೊರೆಯಲಿ. | ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ ಜನರ ನಿರೀಕ್ಷೆ ಮೀರಿ ಹೊಸ ಹೊಸ ಚಾನೆಲ್​ಗಳು ಪ್ರಾರಂಭವಾಗುತ್ತಿವೆ. ನಮ್ಮ ದೇಶದ ಪರಂಪರೆಯನ್ನು ಜನತೆಯ ಮನಸ್ಸಿಗೆ ತುಂಬುವಂತೆ ಪ್ರದರ್ಶನ ಮಾಡುವಂಥದ್ದು ಮಾಧ್ಯಮಗಳ ಮುಖ್ಯ ಉದ್ದೇಶವಾಗಿರಬೇಕು. ಈ ನಿಟ್ಟಿನಲ್ಲಿ ‘ವಿಸ್ತಾರ’ ಸುದ್ದಿವಾಹಿನಿ ಮುನ್ನಡೆಯುತ್ತಿರುವುದು ಗಮನಾರ್ಹ. | ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ ಬ್ರೇಕಿಂಗ್ ನ್ಯೂಸ್ ಬದಲು ಮೇಕಿಂಗ್ ನ್ಯೂಸ್​ನತ್ತ ವಾರ್ತಾ ವಾಹಿನಗಳು ಆದ್ಯತೆ ನೀಡಬೇಕು. ಬರೀ ಋಣಾತ್ಮಾಕ ಸುದ್ದಿಯನ್ನು ಪ್ರಸಾರ ಮಾಡುವ ಬದಲು ಒಳ್ಳೆಯ ಸಮಾಜ ನಿರ್ವಣದಂತಹ ಸುದ್ದಿಗಳಿಗೆ ಹೆಚ್ಚಾಗಿ ಗಮನಹರಿಸಬೇಕು. | ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ ಖಾಕಿ, ಖಾವಿ, ಖಾದಿ ಎಲ್ಲವೂ ಕಲುಷಿತವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಎಲ್ಲವೂ ಕಲುಷಿತವಾಗಿಲ್ಲ. ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದನ್ನು ಗುರುತಿಸುಂತಹ ಕೆಲಸವಾಗಬೇಕಿದೆ. | ವಚನಾನಂದ ಸ್ವಾಮೀಜಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಮಾಧ್ಯಮ ಕ್ಷೇತ್ರಗಳ ಮೂಲಕ ದೇಶದಲ್ಲಿ ಇರುವ ನ್ಯೂನತೆ ಸರಿಪಡಿಸಬೇಕು. ಜತೆಗೆ, ದೇಶದ ಪರಂಪರೆ, ಸಾಂಸ್ಕೃತಿ, ಕಲೆ, ಸಾಹಿತ್ಯ, ಆಚಾರ ವಿಚಾರಗಳ ಬಗ್ಗೆ ಹೆಚ್ಚು ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಾರ್ವಭೌಮತೆಯನ್ನು ಕಾಪಾಡಬೇಕು. | ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ

ಅಂತಃಕರಣ ಮರೆಯಬೇಡಿ

ಬೆಂಗಳೂರು: ರಾಜಕರಾಣಿಗಳು, ಪತ್ರಕರ್ತರು ಅಥವಾ ಪತ್ರಿಕೋದ್ಯಮಿಗಳು ಅಂತಃಕರಣವನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಸ್ತಾರ ಸುದ್ದಿ ವಾಹಿನಿಗೆ ಚಾಲನೆ ನೀಡಿ ಮಾತನಾಡಿದರು. ಮಾಧ್ಯಮಗಳಿಗೂ ಹಾಗೂ ಸಾರ್ವಜನಿಕ ವಲಯಕ್ಕೆ ಅವಿನಾಭಾವ ಸಂಬಂಧವಿದೆ. ಇದೇ ರೀತಿ ಪತ್ರಕರ್ತರಿಗೂ ಮತ್ತು ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧವಿದೆ. ಪತ್ರಿಕೆ ಮತ್ತು ಚಾನೆಲ್​ಗಳಿಂದ ಬಹಳಷ್ಟು ರಾಜಕಾರಣಿಗಳು ದೊಡ್ಡ ಮನುಷ್ಯರಾಗಿದ್ದಾರೆ. ಓದುಗರಿಲ್ಲದೇ ಪತ್ರಿಕೆ ಇಲ್ಲ. ನೋಡುಗರಿಲ್ಲದೇ ವಾಹಿನಿಗಳಿಲ್ಲ. ಈ ಅವಿನಾಭ ಸಂಬಂಧವನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಂಡು, ಅದನ್ನು ನಿರೂಪಿಸಿ ತೋರಿಸುತ್ತಾರೋ ಅಂಥವರು ಯಶಸ್ವಿಯಾಗುತ್ತಾರೆ. ಜನರ ಮನದಾಳದಲ್ಲಿ ಏನಿದೆ ಎಂದು ಅರ್ಥ ಮಾಡಿಕೊಂಡು ಅವರಿಗೆ ಬೇಕಾದನ್ನು ನೀಡಿದರೆ ಖಂಡಿತಾ ಜನ ಮಾಧ್ಯಮಗಳನ್ನು ಒಪ್ಪಿಕೊಳ್ಳುತ್ತಾರೆ ಎಂದರು.

ಆತ್ಮಸಾಕ್ಷಿಯಾಗಿ ನಡೆದುಕೊಂಡಾಗ ಖಾವಿ, ಖಾದಿ, ಅಥವಾ ಖಾಕಿಯೇ ಇರಬಹುದು. ಅದರ ಪಾವಿತ್ರ್ಯತೆ ಉಳಿಸಿಕೊಳ್ಳಬಹುದು. ಪಾವಿತ್ರ್ಯತೆ ಉಳಿಸಿಕೊಳ್ಳಬೇಕಾಗಿರುವುದು ಯಾರು ಧರಿಸಿದ್ದಾರೋ ಅವರ ಮೇಲೆ ಅವಲಂಬಿಸಿರುತ್ತದೆ. ನಾವು ನೋಡುವ ದೃಷ್ಟಿಯಿಂದ ಜಗತ್ತು ಇರುವುದಿಲ್ಲ. ನಮ್ಮ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ನಮ್ಮ ನಮ್ಮ ಕೈಯಲ್ಲಿದೆ ಎಂದು ಹೇಳಿದರು. ಶ್ರೀ ವಚನಾನಂದ ಸ್ವಾಮೀಜಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆರ್.ಅಶೋಕ, ಸುಧಾಕರ್, ಬೈರತಿ ಬಸವರಾಜ್, ಬಿಜೆಪಿ ಮುಖಂಡ ರವಿಕುಮಾರ್ ಇತರರಿದ್ದರು.