ನ್ಯೂಸ್

ಉತ್ತರಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭರ್ಜರಿ ಗೆಲುವು ಫಿಕ್ಸ್​!

ಉತ್ತರಕನ್ನಡ: ಉತ್ತರಕನ್ನಡದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್​ ವಿರುದ್ಧ 1,40,819 ಮತಗಳ ಅಂತರ ಕಾಯ್ದುಕೊಳ್ಳುವ ಮೂಲಕ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

ಬೆಳಗ್ಗೆ 11ರ ಹೊತ್ತಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 3,00,174 ಮತಗಳನ್ನು ಪಡೆದಿದ್ದು, ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್ 1,59,355 ಮತಗಳನ್ನು ಪಡೆದಿದ್ದಾರೆ. ಬರೋಬ್ಬರಿ 1,40,819 ಮತಗಳ ಅಂತರದಿಂದ ಮುನ್ನಡೆ ಕಾಯ್ಡುಕೊಂಡಿದ್ದು, ಉತ್ತರಕನ್ನಡ ಲೋಕಸಭೆಯ ಅಧಿಪತಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

ಮೂರು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಫ್‌ ಫೈಟ್ ನೀಡುವಂತೆ ಕಾಣುತ್ತಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್​ನಿಂದ ಡಾ. ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಪ್ರಬುದ್ಧ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ ವಿಶ್ಲೇಷಣೆ ಕಷ್ಟಸಾಧ್ಯವಾಗುವಷ್ಟರ ಮಟ್ಟಿಗೆ ಹಣಾಹಣಿ ಇದೆ. ಸದ್ಯ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ​ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್​ ಹಿನ್ನಡೆ ಅನುಭವಿಸುತ್ತಿದೆ.

ಮೇ‌ 7ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ಇತಿಹಾಸದಲ್ಲಿಯೇ ಗರಿಷ್ಠ ಶೇ. 76.53 ರಷ್ಟು ಮತದಾನ ದಾಖಲಾಗಿದೆ. ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಸಾಗಿದೆ. ಕಾಂಗ್ರೆಸ್ ಹುರಿಯಾಳು ಡಾ.ಅಂಜಲಿ ನಿಂಬಾಳ್ಕರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೂರು ದಶಕಗಳ ಬಳಿಕ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡಲು ಕ್ಷೇತ್ರದಾದ್ಯಂತ ಭಾರೀ ಪ್ರಚಾರ ಕೈಗೊಂಡಿದ್ದರು. ಕಳೆದ ಬಾರಿ 2019ರಲ್ಲಿ 74.10 ರಷ್ಟು ಮತದಾನ ನಡೆದಿತ್ತು.