ನ್ಯೂಸ್

ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಭೂಮಿ: ವಿಷ್ಣು ಅಭಿಮಾನಿಗಳಲ್ಲಿ ಶುರುವಾಯ್ತು ಹೊಸ ಆತಂಕ! Vishnuvardhan Smaraka

Vishnuvardhan Smaraka : ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ​ ಸ್ಮಾರಕವಿದ್ದ ಸ್ಥಳವನ್ನು ನೆಲಸಮ ಮಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದರಿಂದ ಅಭಿಮಾನಿಗಳ ಆಕ್ರೋಶ ರಾಜ್ಯಾದ್ಯಂತ ಭುಗೆಲೆದ್ದಿತು. ಪ್ರತಿಭಟನೆಗಳು ಕೂಡ ನಡೆದವು. ದಶಕಗಳಿಂದ ವಿವಾದವಾಗಿರುವ ವಿಷ್ಣು ಸ್ಮಾರಕ ಜಾಗ ಪ್ರಕರಣ ಕೊನೆಗೂ ಒಂದು ತಾರ್ಕಿಕ ಅಂತ್ಯ ಕಾಣುವ ಸುಳಿವು ಸಿಕ್ಕಿದೆ. ಸ್ಮಾರಕವಿದ್ದ ಅಭಿಮಾನ್​ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಆದರೆ, ಸರ್ಕಾರ ಉಲ್ಲೇಖಿಸಿರುವ ಒಂದು ಅಂಶ ಅಭಿಮಾನಿಗಳಲ್ಲಿ ಹೊಸ ಆತಂಕ ಉಂಟು ಮಾಡಿದೆ.

ಹೌದು, ಅಭಿಮಾನ್​ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ಅರಣ್ಯ ಭೂಮಿ ಎಂದು ಘೋಷಿಸಲು ಸರ್ಕಾರ ಚಿಂತನೆ ಮಾಡಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಕಳವಳ ವ್ಯಕ್ತಪಡಿಸಿದ್ದು, ತಮ್ಮ ಫೇಸ್​ಬುಕ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್​, ಅಭಿಮಾನ್ ಸ್ಟುಡಿಯೋದ ಒಂದು ಎಕರೆಯನ್ನು 14 ಕೋಟಿ 37 ಲಕ್ಷಕ್ಕೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದ. ಅಂದ್ರೆ ಹತ್ತು ಎಕರೆಗೆ 144 ಕೋಟಿ!

ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿದ್ದ ಅಭಿಮಾನ್ ಸ್ಟುಡಿಯೋದ ಮಾಲೀಕರಿಗೆ ಸರ್ಕಾರ ಕಾನೂನಿನ ಮಹತ್ವವನ್ನು ತಿಳಿಸಿದೆ. ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಂಡು ಆ ಜಾಗವನ್ನು ಪುನಃ ಸರ್ಕಾರದ ವಶಕ್ಕೆ ಪಡೆಯುವ ನಿರ್ಧಾರವನ್ನು ಮಾಡಿದೆ. ಅದಕ್ಕಾಗಿ ಅದು ಪಟ್ಟಿಮಾಡಿರುವ ಕಾರಣಗಳನ್ನು ಎಲ್ಲ ಕನ್ನಡಿಗರು ಓದಿಕೊಳ್ಳಲು ವಿನಂತಿಸುವೆ. ಮೊದಲಿನಿಂದಲೂ ನಾನು ಆ ಜಾಗದ ವಿರುದ್ಧ, ಅಲ್ಲಿನ ಹಣಕಾಸಿನ ಅವ್ಯವಹಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಇದ್ದೆ. ಆದರೆ ಕೆಲವರು ಅಷ್ಟು ದೊಡ್ಡ ಹಗರಣವನ್ನು ಬಿಟ್ಟು, ಅಭಿಮಾನಿಗಳ ಪುಣ್ಯಭೂಮಿಯಂತಹ ಒಂದು ಸಣ್ಣ ಆಸೆಯ ವಿರುದ್ಧ ನಿಂತುಬಿಟ್ಟರು.

ಈಗಲಾದರೂ ನಮ್ಮ ಕೂಗಿಗೆ ನ್ಯಾಯ ಸಿಕ್ಕಿದೆ. ಇದು ನಿಜಕ್ಕೂ ಅಭಿನಂದನೀಯ ಕೆಲಸ. ಅಸಂಖ್ಯಾತ ಅಭಿಮಾನಿಗಳ ಹದಿನೈದು ವರ್ಷಗಳ ನೋವು, ಕಣ್ಣೀರು ಮತ್ತು ಅಸಹಾಯಕತೆಗೆ ನ್ಯಾಯ ಸಿಕ್ಕಿದೆ. ಆದರೆ, ಈ ಆದೇಶದಲ್ಲಿ ಅಭಿಮಾನ್ ಸ್ಟುಡಿಯೋದ ಜಾಗವನ್ನು ಅರಣ್ಯಭೂಮಿ ಎಂದು ಘೋಷಣೆ ಮಾಡಿರುವುದು ಚೂರು ಗೊಂದಲವನ್ನು ಸೃಷ್ಟಿಸಿದೆ. ಅರಣ್ಯಭೂಮಿಯ ನೆಪ ಹೇಳಿ ಅಲ್ಲಿ ಯಜಮಾನ್ರ ಪುಣ್ಯಭೂಮಿ, ಬಾಲಣ್ಣನ ಸಮಾಧಿ ಆಗದಂತೆ ತಡೆದುಬಿಟ್ಟರೆ? ಅದು ಆಗದಿರಲೆಂದು ಒತ್ತಾಯಿಸೋಣ. ಅರಣ್ಯ ಭೂಮಿಯ ಆಶಯಕ್ಕೆ ಅಡ್ಡಿಯಾಗದಂತಹ ಮರ ಗಿಡಗಳಿಂದಲೇ ಕೂಡಿರುವ ಸರಳ ಪುಣ್ಯಭೂಮಿ ನಿರ್ಮಾಣಕ್ಕೆ ಸರ್ಕಾರ ಮನಸು ಮಾಡಬೇಕು. ಇಲ್ಲವಾದರೆ 'ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಕಾರ್ತಿಕನ ಕನಸುಗಳೂ ನೆಲಸಮ' ಆದವೆಂದು ಸಮಾಧಾನಪಡುವುದಕ್ಕಷ್ಟೇ ಈ ತೀರ್ಮಾನ ಉಪಯೋಗಕ್ಕೆ ಬರುತ್ತದೆ.

ಹಾಗಾದರೆ ನಮಗೆ ಅಂತಿಮವಾಗಿ ದಕ್ಕಿದ್ದೇನು? ನಾವು ಬಯಸಿದ್ದು ಪುಣ್ಯಭೂಮಿಯೇ ಹೊರತು ಅಭಿಮಾನ್ ಸ್ಟುಡಿಯೋ ಅಲ್ಲ. ಅಭಿಮಾನ್ ಸ್ಟುಡಿಯೋದ ಮಾಲೀಕರು ಸರ್ಕಾರ, ಕೋರ್ಟು, ಕಚೇರಿ, ಅಭಿಮಾನಿಗಳು, ಕುಟುಂಬ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸ್ತಾ ಹೋಗುವುದನ್ನು ಕಂಡಾಗ ಅದರ ಹಿಂದಿನ ಮರ್ಮ ನಾಡಿನ ಜನತೆಗೆ ತಿಳಿಯಬೇಕು. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ನಾವು ಒತ್ತಾಯಿಸಿದ್ದೆವು.

ಈ ಸಂಬಂಧ ಅಧಿವೇಶನ ಶುರುವಾದ ಮಾರನೇ ದಿನ ನನಗೆ ಸಿಎಂ ಕಚೇರಿಯಿಂದ ಅವರ ಕಾರ್ಯದರ್ಶಿಗಳಾದ ಪ್ರಭಾಕರ್ ಅವರಿಂದ ಕರೆ ಬಂದಿತ್ತು. ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದಿರುವುದಾಗಿ ತಿಳಿಸಿದ್ದರು ಮತ್ತು ಒಂದಷ್ಟು ಮಾಹಿತಿಯನ್ನೂ ಕೇಳಿದ್ದರು. ನಾನು ಅವರಿಗೆ ಬೇಕಿದ್ದ ಒಂದಷ್ಟು ಮಾಹಿತಿ ಮತ್ತು ಅಭಿಮಾನಿಗಳ ವಾದವನ್ನು ತಿಳಿಸಿದ್ದೆ. "ಆ ಜಾಗದ ಸತ್ಯಾಸತ್ಯತೆ ನಮಗೆ ತಿಳಿಯಬೇಕು ಅದಕ್ಕಾಗಿ ನ್ಯಾಯಾಂಗ ತನಿಖೆ ಮಾಡಿ ಮತ್ತು ಆಗಿರುವ ತಪ್ಪುಗಳನ್ನು ಸರಿಪಡಿಸಿ ಪುಣ‌್ಯಭೂಮಿಯನ್ನು ಉಳಿಸಿಕೊಡಿ ಎಂದು ಆ ಸಂದರ್ಭದಲ್ಲಿ ವಿನಂತಿ ಮಾಡಿದ್ದೆ. ಆ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಇದು ತಾರ್ಕಿಕ ಅಂತ್ಯ ಕಾಣುವವರೆಗೂ ಈ ಹೋರಾಟವನ್ನು ಮುಂದುವರಿಸಬೇಕಿದೆ. ಶತಾಯ ಗತಾಯ ಈ ಜಾಗ ಮತ್ತೆ ಸರ್ಕಾರದ ಅಧೀನಕ್ಕೇ ಬರುವಂತೆ ನೋಡಿಕೊಳ್ಳಬೇಕಿದೆ ಮತ್ತು ಡಾ.ವಿಷ್ಣುವರ್ಧನ್ ಮತ್ತು ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿಗಳನ್ನು ಮತ್ತೆ ಮರು ನಿರ್ಮಾಣಗೊಳಿಸಬೇಕಿದೆ ಎಂದು ಶ್ರೀನಿವಾಸ್​ ಹೇಳಿದ್ದಾರೆ.