ನ್ಯೂಸ್

ವರ್ಚುಯಲ್​ ಆಗಿ ನಡೆಯುತ್ತಾ ಸಂಸತ್​ನ ಮುಂಗಾರು ಅಧಿವೇಶನ?

vinaymk1969

ನವದೆಹಲಿ: ಸಂಸತ್​ನ ಮುಂಗಾರು ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಅಧಿವೇಶವನ್ನು ವರ್ಚುಯಲ್​ ಆಗಿ ಆಯೋಜಿಸುವ ಬಗ್ಗೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಚಿಂತನೆ ನಡೆಸಿದ್ದಾರೆ.

ಈ ವಿಷಯದ ಜತೆಗೆ ಇನ್ನೂ ಹಲವು ಮುಖ್ಯ ವಿಚಾರಗಳ ಕುರಿತು ಚರ್ಚಿಸಲು ಎಂ. ವೆಂಕಯ್ಯ ನಾಯ್ಡು ಹಾಗೂ ಓಂ ಬಿರ್ಲಾ ಸೋಮವಾರ ಸಭೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂಸದೀಯ ಸಮಿತಿ ಸಭೆಯನ್ನು ಆಯೋಜಿಸುವಂತೆ ವಿವಿಧ ಪಕ್ಷಗಳ ಸಂಸತ್​ ಸದಸ್ಯರು ಮನವಿ ಮಾಡಿಕೊಂಡಿದ್ದ ಕುರಿತು ಚರ್ಚಿಸಿದರು ಎನ್ನಲಾಗಿದೆ.

ಸಂಸದೀಯ ಸಮಿತಿ ಸಭೆಯಲ್ಲಿನ ಚರ್ಚಿತ ವಿಷಯಗಳ ಕುರಿತು ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದ್ಯ ಇರುವ ನಿಯಮಗಳು ಮತ್ತು ವರ್ಚುಯಲ್​ ಸಭೆಗಳಿಂದಾಗಬಹುದಾದ ಪರಿಣಾಮದ ಕುರಿತು ಇಬ್ಬರು ಚರ್ಚೆ ನಡೆಸಿದರು ಎನ್ನಲಾಗಿದೆ. ಬಳಿಕ ಈ ವಿಷಯವನ್ನು ಉಭಯ ಸದನಗಳ ನೀತಿ ಸಮಿತಿಯ ಚಿಂತನೆಗೆ ಒಪ್ಪಿಸಲು ನಿರ್ಧರಿಸಿದರು.

ಇದಕ್ಕೂ ಮುನ್ನ ಜೂ.3ರಂದು ಆಯೋಜನೆಗೊಳ್ಳಬೇಕಿದ್ದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆ ಮುಂದೂಡಲ್ಪಟ್ಟಿತ್ತು. ಅಂತಾರಾಜ್ಯ ಪ್ರಯಾಣಕ್ಕೆ ನಿರ್ಬಂಧಗಳಿರುವ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಕೆಲ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭಾಧ್ಯಕ್ಷರ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.