ನ್ಯೂಸ್

ಆನ್​ಲೈನ್ ತರಗತಿ ಅಲ್ಲ, ವರ್ಚುವಲ್ ಲರ್ನಿಂಗ್!

lakshmihegde

| ದೇವರಾಜ್ ಎಲ್. ಬೆಂಗಳೂರು

ಆನ್​ಲೈನ್ ತರಗತಿ ನಡೆಸುವುದಕ್ಕೆ ಪಾಲಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೂರ್ವಪ್ರಾಥಮಿಕ ಶಾಲೆಗಳು ಆನ್​ಲೈನ್ ಬದಲಾಗಿ ‘ವರ್ಚುವಲ್ ಲರ್ನಿಂಗ್’ ಬೋಧನೆ ಮಾಡುತ್ತೇವೆಂದು ಪಾಲಕರಿಂದ ಹಣ ವಸೂಲಿಗೆ ಮುಂದಾಗಿವೆ. ಆನ್​ಲೈನ್ ಶಿಕ್ಷಣದ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ವರ್ಚುವಲ್ ಲರ್ನಿಂಗ್ ಎಂಬುದು ಒಂದು ರೀತಿಯಲ್ಲಿ ‘ಅಳಿಯ ಅಲ್ಲ-ಮಗಳ ಗಂಡ’ ಎಂಬಂತಾಗಿದೆ. ಇದು ಕೂಡ ಆನ್​ಲೈನ್​ನಲ್ಲೇ ನಡೆಯಲಿದೆ. ಆನ್​ಲೈನ್ ತರಗತಿಗೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಆದರೆ, ಪಾಲಕರು ಆನ್​ಲೈನ್ ತರಗತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅವರ ಗಮನ ಬೇರೆ ಕಡೆ ಸೆಳೆಯಲು ವರ್ಚುವಲ್ ಲರ್ನಿಂಗ್ ಎಂಬ ಪದ ಬಳಸಲಾಗುತ್ತಿದೆ. ಪೂರ್ವಪ್ರಾಥಮಿಕ ಶಾಲೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಶೈಲಿಯಲ್ಲಿ ನಡೆಸುತ್ತಿರುವ ಕೆಲವು ಪ್ರತಿಷ್ಠಿತ ಶಾಲೆಗಳು ಇಂಥ ವರ್ಚುವಲ್ ಲರ್ನಿಂಗ್ ಎಂಬ ಹೆಸರಿನಲ್ಲಿ ಗಾಳ ಪ್ರಯೋಗಕ್ಕೆ ಮುಂದಾಗಿವೆ.

ಮನವೊಲಿಕೆ: ನಾವು 2020-21ನೇ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧರಾಗಿದ್ದೇವೆ. ಇಂದಿನ ಕರೊನಾ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಅದಕ್ಕಾಗಿ ನಾವು ವರ್ಚುವಲ್ ಲರ್ನಿಂಗ್ ತರಗತಿ ನಡೆಸಲು ಸಜ್ಜಾಗಿದ್ದೇವೆ. ಇದು ಆನ್​ಲೈನ್ ತರಗತಿ ಅಲ್ಲ. ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲೇ ಕುಳಿತು ನಾವು ಮಾಡುವ ಪಾಠ ತೋರಿಸಬಹುದು. ಇದರಿಂದ ಮಕ್ಕಳ ಕಣ್ಣಿಗೆ ಯಾವುದೇ ಹಾನಿ ಇಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಭರವಸೆ ನೀಡಿದೆ. ಇದನ್ನೂ ಓದಿ: ಆಗಸ್ಟ್​ 15ರ ನಂತರ ರಾಷ್ಟ್ರಾದ್ಯಂತ ಶಾಲೆ-ಕಾಲೇಜು ಪುನರಾರಂಭ

ಪ್ಯಾಕೇಜ್: ವರ್ಚುವಲ್ ಲರ್ನಿಂಗ್ ಬೋಧನೆ ತಾತ್ಕಾಲಿಕ ವ್ಯವಸ್ಥೆ ಮಾತ್ರ. ಒಂದು ವಾರ ಕಾಲ ಉಚಿತವಾಗಿರಲಿದೆ. ಆನಂತರ ಪಾಲಕರು ಶುಲ್ಕ ಪಾವತಿಸಬೇಕಾಗುತ್ತದೆ. ಇದರಲ್ಲಿ ಟೀಚರ್ ಟು ಚೈಲ್ಡ್, ಪೇರೆಂಟ್ ಟು ಟೀಚರ್, ಪೇರೆಂಟ್ ಟು ಚೈಲ್ಡ್ ಎಂಬ ಮೂರು ಹಂತದಲ್ಲಿ ತರಗತಿ ನಡೆಸಲಾಗುತ್ತದೆ. ಈ ತರಗತಿ ಜೂ.11ರಂದು ಅನಾವರಣ ಮಾಡಲಾಗುತ್ತಿದ್ದು, 59,150 ರೂ. ಪಾವತಿಸಬೇಕಿದೆ. ಇದನ್ನು ಮೂರು ಕಂತುಗಳಲ್ಲಿ ಪಾವತಿಸಬೇಕು ಎಂದು ಪಾಲಕರಿಗೆ ಸಂದೇಶಗಳು ರವಾನೆ ಆಗಿವೆ.

ಪಾಲಕರಿಗೆ ಚಿಂತೆ: ಲಾಕ್​ಡೌನ್ ವೇಳೆ ಬಹುತೇಕ ಪಾಲಕರು ಆದಾಯ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದಾರೆ. ಈ ವೇಳೆ 50-60 ಸಾವಿರ ರೂ. ಶುಲ್ಕ ಪಾವತಿಸುವುದು ಒಂದು ರೀತಿಯ ಕಷ್ಟವಾದರೆ, ಮತ್ತೊಂದೆಡೆ ವರ್ಚುವಲ್ ಲರ್ನಿಂಗ್​ಗೆ ಮಕ್ಕಳನ್ನು ಅಣಿಗೊಳಿಸುವುದು ಹೇಗೆ? ಎಂಬ ಜಿಜ್ಞಾಸೆ ಉಂಟಾಗಿದೆ. ಇದನ್ನೂ ಓದಿ: ಮಕ್ಕಳ ದಂತಕ್ಷಯದ ಚಿಕಿತ್ಸಾಕ್ರಮಗಳ ಬಗ್ಗೆ ನಿಮಗೆ ಗೊತ್ತಿರಲಿ…

ರಿಪೋರ್ಟ್ ಕಾರ್ಡ್ ನೆಪದಲ್ಲಿ ಗಾಳ

ಆನ್​ಲೈನ್ ತರಗತಿ ನಡೆಸುವ ಹಿನ್ನೆಲೆ ಹಾಗೂ ಪಾಲಕರಿಂದ ಶುಲ್ಕ ವಸೂಲಿ ಮಾಡಲು ‘ರಿಪೋರ್ಟ್ ಕಾರ್ಡ್’ ನೀಡುವ ನೆಪದಲ್ಲಿ ಖಾಸಗಿ ಶಾಲೆಗಳು ಪಾಲಕರನ್ನು ಶಾಲೆಗೆ ಆಹ್ವಾನಿಸುತ್ತಿವೆ. ಈ ವೇಳೆ ಶುಲ್ಕ ಪಾವತಿಸುವಂತೆ ಸೂಚಿಸಿದ್ದು ಮಾತ್ರವಲ್ಲದೆ, ಅವರಿಂದ ವಾಟ್ಸ್​ಆಪ್ ಬಳಕೆ ಇರುವ ಮೊಬೈಲ್​ಫೋನ್ ಸಂಖ್ಯೆ, ಸಾಮಾಜಿಕ ಜಾಲತಾಣ ಬಳಕೆಯ ವಿವರಗಳನ್ನು ಸಂಗ್ರಹಿಸುತ್ತಿರುವುದು ತಿಳಿದು ಬಂದಿದೆ. ಅಲ್ಲದೆ, ಆನ್​ಲೈನ್ ತರಗತಿಯಿಂದ ನಿಮಗೆ ತೊಂದರೆ ಉಂಟಾಗುತ್ತದೆಯೇ? ಎಂದು ನೇರವಾಗಿ ಪ್ರಶ್ನೆ ಕೇಳಿ ಮಾಹಿತಿ ಪಡೆಯುತ್ತಿದ್ದಾರೆಂದು ಪಾಲಕರೊಬ್ಬರು ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಇಂದು ಸಚಿವರಿಂದ ಸಭೆ

ಆನ್​ಲೈನ್ ತರಗತಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಜೂ.8ರಂದು ಅಧಿಕಾರಿಗಳ ಸಭೆ ನಡೆಸಲು ತೀರ್ವನಿಸಿದ್ದಾರೆ. ಉನ್ನತಾಧಿಕಾರಿಗಳ ಜತೆ ರ್ಚಚಿಸಿ ಸೋಮವಾರವೇ ಆನ್​ಲೈನ್ ಶಿಕ್ಷಣ ನೀತಿ ಪ್ರಕಟಿಸಲು ಸಚಿವರು ನಿರ್ಧರಿಸಿದ್ದಾರೆ.