ನ್ಯೂಸ್

ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಅಗ್ರಸ್ಥಾನಕ್ಕೆ ಮರಳಿದ ವಿರಾಟ್​ ಕೊಹ್ಲಿ

ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ 2023 ರಲ್ಲಿ 22.79 ಕೋಟಿ ಡಾಲರ್​ ಬ್ರ್ಯಾಂಡ್ ಮೌಲ್ಯದೊಂದಿಗೆ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ.

2022ರಲ್ಲಿ 17.69 ಕೋಟಿ ಡಾಲರ್​ನಿಂದ ಈ ವರ್ಷದಲ್ಲಿ ಒಟ್ಟಾರೆ ಬ್ರಾಂಡ್ ಮೌಲ್ಯದಲ್ಲಿ ಅಂದಾಜು 29 ಪ್ರತಿಶತದಷ್ಟು ಏರಿಕೆಯನ್ನು ಕೊಹ್ಲಿ ಕಂಡಿದ್ದಾರೆ. 20.31 ಕೋಟಿ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿರುವ ನಟ ರಣವೀರ್ ಸಿಂಗ್ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ ಕ್ರೋಲ್ ವರದಿ ತಿಳಿಸಿದೆ.

ಕ್ರೋಲ್‌ನ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ 2023 ರ ಪ್ರಕಾರ, ಕೊಹ್ಲಿಯ ಬ್ರ್ಯಾಂಡ್ ಮೌಲ್ಯವು 2020ರಲ್ಲಿ ಕಂಡುಬಂದ 23.77 ಕೋಟಿ ಡಾಲರ್​ ಮಟ್ಟವನ್ನು ತಲುಪಿಲ್ಲ.

ಜವಾನ್ ಮತ್ತು ಪಠಾಣ್ ರೀತಿಯ ಚಲನಚಿತ್ರಗಳ ಯಶಸ್ಸಿನ ಮೇಲೆ ಸವಾರಿ ಮಾಡುತ್ತಾ, 58 ವರ್ಷದ ನಟ ಶಾರುಖ್ ಖಾನ್ ಅವರು 2023ರಲ್ಲಿ 12.07 ಕೋಟಿ ಡಾಲರ್​ನ ಒಟ್ಟು ಬ್ರ್ಯಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬಾಲಿವುಡ್‌ನ ಬಾದ್‌ಶಾ 2022 ರಲ್ಲಿ 5.57 ಕೋಟಿ ಡಾಲರ್​ ಮೌಲ್ಯವನ್ನು ಹೊಂದಿದ್ದರು. ಇದು ಅವರನ್ನು ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಇರಿಸಿತ್ತು.

ಶಾರುಖ್​ ಖಾನ್ ಅವರು 2020ರಿಂದ ಮೊದಲ ಬಾರಿಗೆ ಭಾರತದ ಅಗ್ರ ಐದು ಸೆಲೆಬ್ರಿಟಿ ಎಂಡೋಸರ್‌ಗಳ ಲೀಗ್‌ಗೆ ನಂಬಲಾಗದ ರೀತಿಯಲ್ಲಿ ಮರಳುತ್ತಿದ್ದಾರೆ ಎಂದು ಸಂಸ್ಥೆಯ ಮೌಲ್ಯಮಾಪನ ಸಲಹಾ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಅವಿರಾಲ್ ಜೈನ್ ಹೇಳಿದ್ದಾರೆ.

ಇನ್ನೊಬ್ಬ ಬಾಲಿವುಡ್ ನಟ​ ಅಕ್ಷಯ್ ಕುಮಾರ್ ಅವರು 2023ರಲ್ಲಿ 11.17 ಕೋಟಿ ಡಾಲರ್​ ಬ್ರ್ಯಾಂಡ್ ಮೌಲ್ಯದೊಂದಿಗೆ 2022ರಲ್ಲಿನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಆಲಿಯಾ ಭಟ್ ಅವರು 10.11 ಕೋಟಿ ಡಾಲರ್​ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಮತ್ತು ದೀಪಿಕಾ ಪಡುಕೋಣೆ ಅವರು 9.6 ಕೋಟಿ ಡಾಲರ್​ ಮೌಲ್ಯದೊಂದಿಗೆ ಆರನೇ ಸ್ಥಾನ ತಲುಪಿದ್ದಾರೆ. 2022ರಲ್ಲಿ ದೀಪಿಕಾ ಅವರು ಐದನೇ ಸ್ಥಾನದಲ್ಲಿದ್ದರು.

ಇತ್ತೀಚೆಗೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅವರು, 9.58 ಕೋಟಿ ಡಾಲರ್​ ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಮತ್ತೊಬ್ಬ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 9.13 ಕೋಟಿ ಡಾಲರ್​ ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಸಲ್ಮಾನ್ ಖಾನ್ ಅವರು 8.17 ಕೋಟಿ ಡಾಲರ್​ ಮೌಲ್ಯದೊಂದಿಗೆ 2023 ರಲ್ಲಿ ಹತ್ತನೇ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಬ್ರ್ಯಾಂಡ್ ಆಗಲು ಒಂದು ಸ್ಥಾನವನ್ನು ಮೇಲಕ್ಕೆರಿದ್ದಾರೆ.

ಟಾಪ್ 25 ಸೆಲೆಬ್ರಿಟಿ ಬ್ರ್ಯಾಂಡ್‌ಗಳ ಒಟ್ಟಾರೆ ಮೌಲ್ಯಮಾಪನವು 2023 ರಲ್ಲಿ 190 ಕೋಟಿ ಡಾಲರ್​ ಆಗಿದೆ. ಇದು ವರ್ಷದ ಹಿಂದಿನ ಅವಧಿಗಿಂತ ಶೇ 15.5 ಹೆಚ್ಚಾಗಿದೆ.

ಟಾಪ್ 25ರಲ್ಲಿರುವ ಇತರರಲ್ಲಿ, ನಟಿ ಕಿಯಾರಾ ಅಡ್ವಾಣಿ 12 ನೇ ಶ್ರೇಯಾಂಕಕ್ಕೆ ಏರಿಕೆ ಕಂಡಿದ್ದಾರೆ. ನಟಿ ಕತ್ರಿನಾ ಕೈಫ್ 25 ನೇ ಸ್ಥಾನದಲ್ಲಿದ್ದಾರೆ ಎಂದು ಜೈನ್ ತಿಳಿಸಿದ್ದಾರೆ.