ನ್ಯೂಸ್

ಗೆಳತಿಯನ್ನು ಇಂಪ್ರೆಸ್ ಮಾಡಲು ಸಿಂಹದ ಬೋನಿಗೆ ನುಗ್ಗಿ ವಿಡಿಯೋ ಮಾಡಿದ ವ್ಯಕ್ತಿ; ಮುಂದೇನಾಯ್ತು ನೀವೇ Viral Video ನೋಡಿ

ತಾಷ್ಕೆಂಟ್: ಉಜ್ಬೇಕಿಸ್ತಾನದ ಪಾರ್ಕೆಂಟ್‌ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 44 ವರ್ಷದ ಝೂಕೀಪರ್ ಎಫ್​​ ಇರಿಸ್ಕುಲೋವ್ ಎಂಬ ವ್ಯಕ್ತಿ ತನ್ನ ಗೆಳತಿಯನ್ನು ಮೆಚ್ಚಿಸಲು ಮೂರು ಆಫ್ರಿಕನ್ ಸಿಂಹಗಳಿರುವ ಬೋನಿಗೆ ಪ್ರವೇಶಿಸಿದ್ದಾನೆ. ಇದರಿಂದಾಗಿ ಅವನು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಣೆ ಎಂದು ಹೇಳಲಾಗುತ್ತಿದೆ. ಸಿಂಹದ ಬೋನಿಗೆ ವ್ಯಕ್ತಿ ಪ್ರವೇಶಿಸುವ ವಿಡಿಯೋ ವೈರಲ್​(Viral Video) ಆಗಿದೆ.

ಡಿಸೆಂಬರ್ 17 ರಂದು ಮುಂಜಾನೆ 5 ಗಂಟೆಗೆ ತನ್ನ ರಾತ್ರಿ ಪಾಳಿಯ ಸಮಯದಲ್ಲಿ ಮೃಗಾಲಯದ ಇರಿಸ್ಕುಲೋವ್ ಅವರು ಸಿಂಹಗಳಿರುವ ಬೋನಿಗೆ ಪ್ರವೇಶಿಸುವ ವಿಡಿಯೋವನ್ನು ಮಾಡಿದ್ದಾರೆ. ಆದರೆ ಅದೇ ಅವರ ಜೀವನದ ಕೊನೆಯ ವಿಡಿಯೋ ಎಂದು ಸಾಬೀತಾಗಿದೆ. ತನ್ನ ಗೆಳತಿಗೆ ಕಳುಹಿಸಲು ಈ ವಿಡಿಯೋ ಮಾಡಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.

ವೈರಲ್ ವಿಡಿಯೋದಲ್ಲಿ ವ್ಯಕ್ತಿ ಸಿಂಹಗಳಿರುವ ಬೋನಿನ ಬೀಗವನ್ನು ತೆರೆದು ಒಳಗೆ ಹೋಗುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ ಮೂರು ಸಿಂಹಗಳು ಶಾಂತವಾಗಿ ಕುಳಿತಿರುವುದು ಕಂಡುಬರುತ್ತದೆ. ಸಿಂಹಗಳು ಸಮೀಪಿಸುತ್ತಿದ್ದಂತೆ ಇರಿಸ್ಕುಲೋವ್ ಕೂಡ ಸಿಂಬಾ ಎಂದು ಕರೆಯುವುದನ್ನು ಕೇಳಬಹುದು. ಅಷ್ಟೇ ಅಲ್ಲ, ಸಿಂಹವನ್ನು ಮುದ್ದಿಸುತ್ತಾನೆ. ಆದರೆ ಸಿಂಹವು ಅವರ ಕೈಗಳನ್ನು ನೆಕ್ಕಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ವಾಸ್ತವವಾಗಿ ಪಂಜರವನ್ನು ಪ್ರವೇಶಿಸಿದ ಕೇವಲ 2 ನಿಮಿಷಗಳ ನಂತರ ಸಿಂಹವು ಐರಿಸ್ಕುಲೋವ್ ಮೇಲೆ ದಾಳಿ ಮಾಡುತ್ತದೆ. ಅವರ ಕಿರುಚಾಟ ವಿಡಿಯೋದಲ್ಲಿ ಕೇಳಿಬರುತ್ತಿದೆ. ವಿಡಿಯೋ ಅಲ್ಲಿಗೆ ಕೊನೆಗೊಳ್ಳುತ್ತದೆ.

ಸಿಂಹಗಳು ಆತನನ್ನು ಕೊಂದು ಆತನ ದೇಹವನ್ನು ಭಾಗಶಃ ತಿಂದಿವೆ ಎಂದು ಅಧಿಕೃತ ಹೇಳಿಕೆಯಲ್ಲಿರುವುದಾಗಿ ರಷ್ಯಾದ ಮಾಧ್ಯಮ ವರದಿ ಮಾಡಿದೆ. ಇದುವರೆಗೂ ಈ ವಿಡಿಯೋವನ್ನು 11 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಆತ ಮೂರ್ಖ, ಸಿಂಹದ ಆವರಣಕ್ಕೆ ಹೋಗುವುದು ಕೆಟ್ಟ ನಿರ್ಧಾರ, ಕಾಡು ಪ್ರಾಣಿಗಳೊಂದಿಗೆ ಗೊಂದಲಕ್ಕೀಡಾಗುವುದು ಸರಿಯಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)