Cab Driver : ಕೇವಲ 95 ಪೈಸೆಗಾಗಿ ಮಹಿಳಾ ಪತ್ರಕರ್ತೆ ಮತ್ತು ಕ್ಯಾಬ್ ಚಾಲಕ ಜಗಳವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರದಲ್ಲಿ ಬಹುತೇಕ ನೆಟ್ಟಿಗರು ಕ್ಯಾಬ್ ಚಾಲಕನ ಬೆಂಬಲಕ್ಕೆ ನಿಂತಿದ್ದಾರೆ.
ಈ ವಾಗ್ವಾದದ ವಿಡಿಯೋವನ್ನು ಸಾಮಾಜಿಕ ಹಕ್ಕುಗಳ ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರೆ, ಚಾಲಕ ತನಗೆ ಬೆದರಿಕೆ ಹಾಕಿ ಟ್ಯಾಕ್ಸಿ ಶುಲ್ಕ ಪಾವತಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಮಹಿಳಾ ಪತ್ರಕರ್ತೆ ತಾನು ಪತ್ರಕರ್ತೆ ಎಂದು ಹೇಳಿಕೊಂಡು ಕ್ಯಾಬ್ ಚಾಲಕನಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಬಾಕಿ 95 ಪೈಸೆ ಪಾವತಿಸಲು ಮಹಿಳೆ ತುಂಬಾ ಅಹಂಕಾರದಿಂದ ವರ್ತಿಸಿದ್ದಾಳೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಕೇವಲ 95 ಪೈಸೆಗೆ ಕ್ಯಾಬ್ ಚಾಲಕನನ್ನು ಬೆದರಿಸುವುದು ಅಗತ್ಯವೇ? ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದಾರೆ. ಕ್ಯಾಬ್ ಚಾಲಕನ ತಪ್ಪಿಲ್ಲದಿದ್ದರೂ, ಮಹಿಳೆ ಎಂಬ ಅಸ್ತ್ರ ಬಳಸಿ ಆತನಿಗೆ ಬೆದರಿಕೆ ಹಾಕುವುದು ಸರಿಯಲ್ಲ. ನಿಮ್ಮ ಕೈಯಲ್ಲಿ ಅಷ್ಟೊಂದು ಹಣವಿಲ್ಲದಿದ್ದರೆ, ನೀವು ಬಸ್ನಲ್ಲಿ ಹೋಗಬಹುದಿತ್ತು. ಅದನ್ನು ಬಿಟ್ಟು ಕ್ಯಾಬ್‌ನಲ್ಲಿ ಹೋಗಿ ಏಕೆ ಜಗಳವಾಡಬೇಕು? ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಈ ಘಟನೆಯನ್ನು ವಿವರಿಸಿರುವ ಮಹಿಳಾ ಪತ್ರಕರ್ತೆ ಶಿವಾಂಗಿ ಶುಕ್ಲಾ, ತಾನು ಕ್ಯಾಬ್ ಚಾಲಕನಿಗೆ ಬೆದರಿಕೆ ಹಾಕಿಲ್ಲ. ಆದರೆ, ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಕ್ಯಾಬ್ ಅನ್ನು ಲೊಕೇಶನ್ನಿಂದ ದೂರ ನಿಲ್ಲಿಸಿ, ನಾನು ಹೇಳಿದ ಲೊಕೇಶನ್ಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದನು. ಬಳಿಕ ನಾನು ಕ್ಯಾಬ್‌ನಿಂದ ಇಳಿದು 129 ರೂ. ಪಾವತಿಸಿದೆ. ಆದರೆ, ಆತುರದಲ್ಲಿ, 95 ಪೈಸೆಯನ್ನು ಪಾವತಿಸಲಿಲ್ಲ. ಈ ಮಧ್ಯೆ, ಕ್ಯಾಬ್ ಚಾಲಕ ನನ್ನೊಂದಿಗೆ ವಾಗ್ವಾದಕ್ಕೆ ಇಳಿದನು. ನೀವು 95 ಪೈಸೆ ಏಕೆ ಪಾವತಿಸಲಿಲ್ಲ ಎಂದು ಕೇಳಿದನು. ಈ ವೇಳೆ ನಾನು ಪತ್ರಕರ್ತೆ ಮತ್ತು ನನ್ನ ಮೇಲೆ ಒತ್ತಡ ಹೇರಬೇಡಿ ಎಂದು ಎಚ್ಚರಿಸಿದೆ ಎಂದು ಶಿವಾಂಗಿ ಶುಕ್ಲಾ ತಿಳಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ನಡೆಗೆ ವಿರೋಧ ವ್ಯಕ್ತವಾಗಿದೆ. (ಏಜೆನ್ಸೀಸ್)