ಕಾಲ ಕಳೆದಂತೆ ನಮ್ಮ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುತ್ತವೆ. ಮೊದಲೆಲ್ಲಾ ಮಕ್ಕಳನ್ನು ಶಾಲೆಗೆ ಬಿಡಲು, ಮತ್ತೆ ಮನೆಗೆ ಕರೆದುಕೊಂಡಲು ಪಾಲಕರಲ್ಲಿ ಒಬ್ಬರು ಬರುತ್ತಿದ್ದರು. ಈಗ ಹೆಚ್ಚಾಗಿ ಶಾಲೆಯ ಬಸ್ ಅಥವಾ ಖಾಸಗಿ ಆಟೋ, ವ್ಯಾನ್ಗಳಿಂದ ಪಿಕ್ಅಪ್ ಆ್ಯಂಡ್ ಡ್ರಾಪ್ ಮಾಡಲಾಗುತ್ತದೆ. ಆದರೆ ಇದಕ್ಕೆ ವಿಭಿನ್ನವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಶ್ವಾನವೊಂದು ಹುಡುಗಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದೆ. ಇದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಶಸ್ತ್ರಚಿಕಿತ್ಸೆ ವೇಳೆ ಯುವಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ವೈದ್ಯರೆ ಶಾಕ್; ಚಾಕು-ನೇಲ್ ಕಟರ್ ಏನೆಲ್ಲಾ ಸಿಕ್ತು ಗೊತ್ತಾ?
ಶಾಲೆಯಿಂದ ಮಗುವನ್ನು ಕೆರೆದುಕೊಂಡು ಹೊಗಲು ಶ್ವಾನವೊಂದು ಬಂದಿರುವುದು ವಿಶೇಷವಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಯಿಯು ಮಗುವಿಗಾಗಿ ಶಾಲೆಯ ಹೊರಗೆ ಕಾಯುತ್ತ ಕುಳಿತಿದೆ. ಸ್ಕೂಲ್ ಬೆಲ್ ಆದ ತಕ್ಷಣ ಹುಡುಗಿ ಓಡಿ ಬಂದು ನಿಲ್ಲಿಸಿದ್ದ ವಿಶೇಷ ವಾಹನದಲ್ಲಿ ಕುಳಿತುಕೊಳ್ಳುತ್ತಾಳೆ. ಆಕೆ ಕುಳಿತುಕೊಂಡ ತಕ್ಷಣ ನಾಯಿಯು ಆ ವಿಶೇಷ ಬಂಡಿಯನ್ನು ಎಳೆಯಲು ಪ್ರಾರಂಭಿಸುತ್ತದೆ. ಆಗಿನ ಕಾಲದಲ್ಲಿ ರಾಜವಂಶಸ್ಥರು ಕುಳಿತುಕೊಳ್ಳುತ್ತಿದ್ದ ರಥವನ್ನು ಕುದುರೆಗಳು ಎಳೆದೊಯ್ಯುತ್ತಿದ್ದಂತೆ, ಈ ನಾಯಿಯು ಮಗು ಕುಳಿತಿದ್ದ ವಿಶೇಷ ವಾಹನವನ್ನು ಎಳೆದೊಯ್ದಿರುವುದನ್ನು ಕಾಣಬಹುದಾಗಿದೆ.
ರಸ್ತೆಯಲ್ಲಿ ಇತರ ವಾಹನಗಳು ಓಡಾಡುತ್ತಿರುವುದನ್ನು ಕಾಣಬಹುದು. ಯಾವುದೇ ಅಪಘಾತವಾಗದಂತೆ ಬಹಳ ಸುರಕ್ಷಿತವಾಗಿ ನಾಯಿ ಮಗುವನ್ನು ಮನೆಗೆ ಸೇರಿಸಿದೆ. ಗಾಡಿಯಿಂದ ಇಳಿದ ಹುಡುಗಿ ನಾಯಿಯನ್ನು ನೋಡಿ ಮನೆಗೆ ಹೋಗುತ್ತಾಳೆ. ಅಲ್ಲದೆ ವಿಶೇಷ ಗಾಡಿಯಲ್ಲಿ ಕುಳಿತಿದ್ದ ಆ ಮಗು ತನ್ನ ಪ್ರಯಾಣವನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ವಿಡಿಯೋ ಶೇರ್ ಆದ ಕ್ಷಣಾರ್ಧದಲ್ಲಿ ಸಾಕಷ್ಟು ವೈರಲ್ ಆಗಿದೆ. 56 ಲಕ್ಷ ಮಂದಿ ವಿಡಿಯೋವನ್ನು ವೀಕ್ಷಿಸಿದ್ದು, 87 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅನೇಕರು ನಾಯಿಯ ಕೆಲಸ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್)