Viral Faces: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ-ವಿದೇಶಗಳಿಂದ ಆಗಮಿಸಿದ ಕೋಟ್ಯಂತರ ಭಕ್ತಾಧಿಗಳು, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಮೌನಿ ಅಮಾವಾಸ್ಯೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಧರ್ಮ, ಭಾಷೆ, ಬಣ್ಣಗಳ ಭೇದವಿಲ್ಲದೆ ಮೇಳದಲ್ಲಿ ಭಾಗವಹಿಸಿದ ಭಕ್ತರು, ಜಾಗತಿಕವಾಗಿ ಜನಮನ ಸೆಳೆದಿದ್ದು ವಿಶೇಷ.
ಒಂದೆಡೆ ಕೋಟ್ಯಂತರ ಭಕ್ತಾಧಿಗಳ ಸಾಗರವೇ ತ್ರಿವೇಣಿ ಸಂಗಮದಲ್ಲಿ ಸೇರುವ ಮೂಲಕ ಭಕ್ತ ಸಮೂಹವನ್ನು ಸೆಳೆದರೆ, ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಸಾಧುಗಳು, ವಿಭಿನ್ನ ವ್ಯಕ್ತಿತ್ವದ ಮನಸ್ಸುಗಳು ಸೇರಿದಂತೆ ಅನೇಕರು ನೆಟ್ಟಿಗರನ್ನು ಸೆಳೆದಿದ್ದಾರೆ. ಮಹಾಕುಂಭ ಮೇಳಕ್ಕೆ ಆಗಮಿಸಿದ್ದ ಜನರ ಗಮನವನ್ನು ಕ್ಷಣಮಾತ್ರದಲ್ಲಿ ತಮ್ಮತ್ತ ಸೆಳೆದ ಇವರು, ಕೇವಲ ಕುಂಭಮೇಳಕ್ಕೆ ಮಾತ್ರ ಸೀಮಿತವಾಗದೆ ಜಾಲಾತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದರು. ಅಸಲಿಗೆ ಯಾರು ಅವರೆಲ್ಲಾ? ಎಂಬುದರ ವಿವರ ಹೀಗಿದೆ ನೋಡಿ.
ಮಹಾಕುಂಭ ಮೇಳಕ್ಕೆ ಆಗಮಿಸುತ್ತಿದ್ದ ಭಕ್ತರಿಗೆ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ಎಂಬ ಈ ಯುವತಿ, ತನ್ನ ನೈಜ ಸೌಂದರ್ಯ ಹಾಗೂ ಜೇನುಗಣ್ಣಿನಿಂದಲೇ ನೆಟ್ಟಿಗರನ್ನು ತನ್ನತ್ತ ಸೆಳೆದರು. ಆಕೆಯ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದೇ ತಡ ಮೊನಾಲಿಸಾ ಬಗ್ಗೆ ವ್ಯಾಪಕ ಚರ್ಚೆಗಳು ಭುಗಿಲೆದ್ದಿತು. ವರದಿಗಳ ಪ್ರಕಾರ, ಬಾಲಿವುಡ್ ಅಂಗಳಕ್ಕೆ ಹಾರಿರುವ ಜೇನುಗಣ್ಣು ಸುಂದರಿ, ಸದ್ಯ ಸಖತ್ ಸ್ಟೈಲಿಶ್ ಆಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಸಾಮಾನ್ಯ ಜೀವನವನ್ನು ತ್ಯಜಿಸಿ ಆಧ್ಯಾತ್ಮದತ್ತ ಮುಖ ಮಾಡಿರುವ ಐಐಟಿ ಬಾಬಾ ಅಭಯ್ ಸಿಂಗ್, ತಮ್ಮ ಪದವಿ ಮತ್ತು ಪ್ರತಿಷ್ಠಿತ ಸಂಸ್ಥೆಯಲ್ಲಿನ ಉದ್ಯೋಗ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದರ ಹಿಂದಿನ ಕಾರಣಗಳು ಅವರನ್ನು ಕ್ಷಣಮಾತ್ರದಲ್ಲಿ ವೈರಲ್ ಮಾಡಿತು. ಮಹಾಕುಂಭ ಮೇಳದ ಭಾಗವಾಗಿದ್ದ ವೈರಲ್ ಐಐಟಿ ಬಾಬಾ, ತನ್ನ ಕುಟುಂಬದ ವಿಚಾರಕ್ಕೂ ತೀರ ಚರ್ಚೆಗೆ ಗ್ರಾಸವಾಗಿದ್ದರು. ಐಐಟಿ ಬಾಬಾ ಅಥವಾ ಇಂಜಿನಿಯರ್ ಬಾಬಾ ಎಂದು ಕರೆಯಲ್ಪಡುವ ಸಿಂಗ್, ಕುಂಭ ಮೇಳದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದರು.
ಪಂಚಾಯತಿ ನಿರಂಜನಿ ಅಖಾರದ ದಿಗಂಬರ ಅಜಯ್ ಗಿರಿ, ರುದ್ರಾಕ್ಷಿ ಬಾಬಾ ಎಂದೇ ಗುರುತಿಸಿಕೊಂಡ ಇವರು, ಬರೋಬ್ಬರಿ 11,000 ರುದ್ರಾಕ್ಷಿಗಳನ್ನು ಒಳಗೊಂಡಿರುವ 108 ಮಾಲೆಗಳನ್ನು ಧರಿಸುವ ಮೂಲಕ ಹಲವರ ಅಚ್ಚರಿಗೆ ಕಾರಣರಾದರು. ಈ ರುದ್ರಾಕ್ಷಿಗಳ ತೂಕ 40 ಕೆಜಿಗಿಂತ ಹೆಚ್ಚಿದೆ ಎನ್ನಲಾಗಿದೆ. ರುದ್ರಾಕ್ಷಿ ಬಾಬಾರನ್ನು ನೋಡಲು, ಅವರ ಫೋಟೋಗಳನ್ನು ತೆಗೆಯಲು ಭಕ್ತರ ದಂಡೇ ಮುಗಿಬಿದ್ದಿದ್ದು, ವೈರಲ್ಗೆ ಮತ್ತಷ್ಟು ಪುಷ್ಟಿ ನೀಡಿತು.
ಆಪಲ್ ಸಹ-ಸಂಸ್ಥಾಪಕರಾದ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಈ ಬಾರಿಯ ಮಹಾಕುಂಭ ಮೇಳದಲ್ಲಿ ಗಮನ ಸೆಳೆದರು. ಒಂದು ವರ್ಷದ ಹಿಂದೆ ಪಂಚಾಯತಿ ಅಖಾಡ ಶ್ರೀ ನಿರಂಜನೀಯ ಅವರು ಲಾರೆನ್ಗೆ 'ಕಮಲಾ' ಎಂಬ ಹಿಂದೂ ಹೆಸರನ್ನು ನೀಡಿದ್ದರು. ಈಗ ಸನಾತನ ಧರ್ಮಕ್ಕೆ ಸೇರಿ, ಅಲ್ಲಿನ ಸಂಪ್ರದಾಯವನ್ನು ಕಲಿಯಲು ಆಕೆ ಬಯಸಿದ್ದಾರೆ ಎನ್ನಲಾಗಿದೆ. ಲಾರೆನ್ ಸಹ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಅನೇಕರ ಹುಬ್ಬೇರಿಸಿತು.
ರಷ್ಯಾದಿಂದ ಮಹಾಕುಂಭ ಮೇಳಕ್ಕೆ ಬಂದಿಳಿದ 7 ಅಡಿ ಎತ್ತರದ "ಕಟ್ಟುಮಸ್ತಾದ ಬಾಬಾ", ತಮ್ಮ ಉತ್ತಮವಾದ ಮೈಕಟ್ಟಿನಿಂದಲೇ ನೆರೆದಿದ್ದ ಭಕ್ತಾಧಿಗಳ ಗಮನ ಸೆಳೆದರು. ಸರಳವಾದ ಕೇಸರಿ ಬಣ್ಣದ ಉಡುಪನ್ನು ಧರಿಸಿದ್ದ ಬಾಬಾ, ತಮ್ಮ ಪಕ್ಕದಲ್ಲಿ ದೊಡ್ಡ ಜೋಳವನ್ನು ಮತ್ತು ಕುತ್ತಿಗೆಗೆ ರುದ್ರಾಕ್ಷಿ ಮಾಲೆಯನ್ನು ಹೊತ್ತುಕೊಂಡೇ ಕುಂಭಮೇಳದಲ್ಲಿ ವೈರಲ್ ಆಗಿ ಜನಮನ ಸೆಳೆದರು.
ಚಹಾ ಮಾರಿಕೊಂಡೇ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಹಂಬಲವಿರುವ ವಿದ್ಯಾರ್ಥಿಗಳಿಗೆ ಹಣ ತೆಗೆದುಕೊಳ್ಳದೇ ಉಚಿತ ತರಬೇತಿ ನೀಡುತ್ತಿರುವ ಚಾಯ್ವಾಲಾ ಬಾಬಾ, ಕುಂಭಮೇಳದಲ್ಲಿ ಚಹಾ ಮಾರಾಟಗಾರನಾಗಿ ಬದಲಾದ ಸನ್ಯಾಸಿ. ಕಳೆದ 40 ವರ್ಷಗಳಿಂದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುತ್ತ ಬಂದಿರುವ ಬಾಬಾ, ಯಾರೊಂದಿಗೂ ಒಂದು ಅಕ್ಷರವೂ ಮಾತನಾಡದೆ ಕೇವಲ ಬರಹ, ವಾಟ್ಸಾಪ್ ಸಂದೇಶದ ಮೂಲಕವೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ವಿಶೇಷ. ಇದರೊಟ್ಟಿಗೆ ಆಹಾರ ಸೇವಿಸದೆ ದಿನ ತಳ್ಳುವ ಬಾಬಾ, ದಿನಕ್ಕೆ 10 ಕಪ್ ಚಹಾ ಕುಡಿದೇ ಜೀವನ ಸಾಗಿಸುತ್ತಿರುವುದು ವೈರಲ್ಗೆ ಕಾರಣವಾಯಿತು.
ನಾಜ್ ವಾಲೆ ಬಾಬಾ ಎಂದೇ ಪ್ರಸಿದ್ಧರಾಗಿರುವ ಅಮರ್‌ಜೀತ್, ತಮ್ಮ ತಲೆಯ ಮೇಲೆ ಸಸಿಯನ್ನು ಬೆಳೆಯುವ ಮೂಲಕ ನೆಟ್ಟಿಗರ ಗಮನ ಸೆಳೆದರು. ಕಳೆದ ಐದು ವರ್ಷಗಳಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಈ ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿರುವ ಬಾಬಾ, ತಮ್ಮ ತಲೆಯ ಮೇಲೆ ಗೋಧಿ, ರಾಗಿ, ಕಡಲೆ ಮತ್ತು ಬಟಾಣಿಗಳನ್ನು ಬೆಳೆಯುತ್ತಾರೆ. ದಿನನಿತ್ಯ ಇವುಗಳನ್ನು ಪೋಷಿಸಲು ನೀರನ್ನು ಹಾಕುವುದು ಮತ್ತೊಂದು ವಿಶೇಷ. ಒಟ್ಟಾರೆ ಈ ವರ್ಷದ ಮಹಾಕುಂಭ ಮೇಳದಲ್ಲಿ ಜನರ ಗಮನ ಸೆಳೆದು, ವೈರಲ್ ಪಟ್ಟಿಗೆ ಸೇರಿದ ವ್ಯಕ್ತಿಗಳಿವರು,(ಏಜೆನ್ಸೀಸ್).