ಕಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ನಡುವೆಯೇ ನಡೆದಿದ್ದ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯವು ಮಂಗಳವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆಯ ನಡೆವೆಯೂ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕೌಂಟಿಂಗ್ ಸೆಂಟರ್ ಮುಂಭಾಗ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದಲ್ಲದೆ ಹೌರಾದಲ್ಲಿ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸಲು ಗುಂಪೊಂದು ಯತ್ನಿಸಿದ್ದು, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ.
ಇನ್ನು ಮಾಲ್ಡ ಜಿಲ್ಲೆಯಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳೆಯ ಪತಿ ಬ್ಯಾಲೆಟ್ ಬಾಕ್ಸ್ಅನ್ನು ತಗೆದುಕೊಂಡು ಪರಾರಿಯಾಗಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಕೂಡಲ್ಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂಚಾಯತ್ ಚುನಾವಣೆಯ ಮತ ಎಣಿಕೆ ವೇಳೆ ಹಿಂಸಾಚಾರದ ಲುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಇಂತಹ ಅಹಿತಕರ ಘಟನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಈ ರೀತಿ ದುರ್ವತನೆ ತೋರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.