ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರವು 2023ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿರುವ ಸುದ್ದಿ ಬಂದ ಹಿನ್ನೆಲೆಯಲ್ಲಿಯೇ, 'ವಿಕ್ರಾಂತ್ ರೋಣ' ಚಿತ್ರ ಸಹ ಆಸ್ಕರ್ ಕಣದಲ್ಲಿರುವ ಸುದ್ದಿ ಬಂದಿದೆ.
ಈ ವರ್ಷ, ಆಸ್ಕರ್ ಕಣದಲ್ಲಿ 301 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ಈ ಪೈಕಿ ಒಂಬತ್ತು ಭಾರತೀಯ ಚಿತ್ರಗಳು ಕಣದಲ್ಲಿವೆ. 'RRR', 'ಕಾಂತಾರ', 'ರಾಕೆಟ್ರಿ - ದಿ ನಂಬಿ ಎಫೆಕ್ಟ್', 'ಇರವಿನ್ ನಿಳಲ್' ಮತ್ತು 'ವಿಕ್ರಾಂತ್ ರೋಣ' ಚಿತ್ರಗಳು ಸ್ಪರ್ಧಿಸುತ್ತಿವೆ.
ಈ ವಿಷಯವಾಗಿ ಮಾಹಿತಿ ಹಂಚಿಕೊಂಡಿರುವ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ, 'ಆಸ್ಕರ್ ಕಣದಲ್ಲಿ 'ವಿಕ್ರಾಂತ್ ರೋಣ' ಚಿತ್ರವೂ ಇರುವುದು ಖುಷಿಯ ವಿಚಾರ. ಈ ಹಿಂದೆ 2016ರಲ್ಲಿ 'ರಂಗಿತರಂಗ' ಸಹ ಸ್ಪರ್ಧಿಸಿತ್ತು. ಈಗ 'ಕಾಂತಾರ' ಮತ್ತು 'ವಿಕ್ರಾಂತ್ ರೋಣ' ಸೇರ್ಪಡೆಯಾಗಿದೆ' ಎಂದು ಬರೆದುಕೊಂಡಿದ್ದಾರೆ.
'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಅಭಿನಯಿಸಿದ್ದು, ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ.ಶಾಲಿನಿ ಆರ್ಟ್ಸ್ ಸಂಸ್ಥೆಯಡಿ ಈ ಚಿತ್ರವನ್ನು ಜಾಕ್ ಮಂಜು ನಿರ್ಮಿಸಿದ್ದಾರೆ.