ನವದೆಹಲಿ: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಜೈಲಿನಲ್ಲಿದ್ದುಕೊಂಡೇ ಎಲ್ಲ ರೀತಿಯ ಅಪರಾಧ ಕೃತ್ಯಗಳಿಗೂ ಸ್ಕೆಚ್ ಹಾಕುತ್ತಿದ್ದ. ರಾಜಕೀಯವಾಗಿಯೂ ದುಬೆ ಬಹಳ ಪ್ರಭಾವಿ. ಹೀಗಾಗಿ ಅನೇಕ ರಾಜಕೀಯ ಕೊಲೆ ಪ್ರಕರಣಗಳಲ್ಲಿ ಈತ ನೇರವಾಗಿ ಭಾಗಿಯಾಗಿದ್ದ. ಸಮಾಜದ ಅನೇಕ ಗಣ್ಯರ ಹತ್ಯೆಗೆ ಸ್ಕೆಚ್ ಕೂಡ ಹಾಕಿದ್ದ ಎಂಬುದು ಅನೇಕ ಸಂದರ್ಭಗಳಲ್ಲಿ ಬಹಿರಂಗವಾಗಿದೆ.
ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರ ಇದ್ದಾಗ 2002ರಲ್ಲಿ ವಿಕಾಸ್ ದುಬೆ ಕಾನ್ಪುರದ ಬಿಲ್ಹಾರ್ಮ್ ಶಿವರಾಜ್ಪುರ, ಚೌಬೇಪುರ, ರಾಣಿಯಾ ಪ್ರದೇಶಗಳಲ್ಲಿ ಬಹಳ ಮುಕ್ತವಾಗಿ ಓಡಾಡಿಕೊಂಡಿದ್ದ. ಈ ಅವಧಿಯಲ್ಲಿ ಈತ ಅಕ್ರಮವಾಗಿ ಸಾಕಷ್ಟು ಆಸ್ತಿ ಸಂಪಾದಿಸಿದ್ದ ಆರೋಪವಿದೆ.
ಶಿವರಾಜ್ಪುರದಿಂದ ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ. ಆ ಸಂದರ್ಭದಲ್ಲಿ ದುಬೆ ಜೈಲಿನಲ್ಲೇ ಇದ್ದ. ಬಿಎಸ್ಪಿಯ ಹಿರಿಯ ನಾಯಕರೊಬ್ಬರಿಗೂ ಬಹಳ ಆಪ್ತನಾಗಿ ಕಾಣಿಸಿಕೊಂಡಿದ್ದ. ಇದೂ ಅಲ್ಲದೆ, 1990ರ ದಶಕದಲ್ಲಿ ಜನತಾ ದಳದಲ್ಲಿದ್ದ ಅಂದಿನ ಶಾಸಕ ಹರಿಕಿಶನ್ ಶ್ರೀವಾಸ್ತವ ಅವರ ಆಪ್ತನಾಗಿದ್ದ. ಶ್ರೀವಾಸ್ತವ ನಂತರದಲ್ಲಿ ಬಿಎಸ್ಪಿ ಸೇರಿದ್ದರು. ಈ ಅವಧಿಯಲ್ಲಿ ಶ್ರೀವಾಸ್ತವ ಅವರ ಪ್ರತಿಸ್ಪರ್ಧಿ ಸಂತೋಷ್ ಶುಕ್ಲಾರನ್ನು ದುಬೆ ಪೊಲೀಸ್ ಠಾಣೆಯಲ್ಲೇ ಹತ್ಯೆಗೈದಿದ್ದ.
ಸೋದರ ಸಂಬಂಧಿ ಅನುರಾಗ್ ಹತ್ಯೆಗೆ ಮಾಟಿ ಜೈಲಿನಲ್ಲಿದ್ದುಕೊಂಡೇ 2018ರಲ್ಲಿ ಸ್ಕೆಚ್ ರೂಪಿಸಿದ್ದ. ಇದನ್ನು ಅನುರಾಗ್ ಪತ್ನಿ ಆರೋಪಿಸಿದ್ದು, ದೂರಿನಲ್ಲಿ ವಿಕಾಸ್ ದುಬೆ ಮತ್ತು ನಾಲ್ವರ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. 2000ನೇ ಇಸವಿಯಲ್ಲಿ ರಾಮಬಾಬು ಯಾದವ್ ಎಂಬಾತನ ಹತ್ಯೆಗೂ ಸ್ಕೆಚ್ ಹಾಕಿ ಯಶಸ್ವಿಯಾಗಿದ್ದ. 2004ರಲ್ಲಿ ಕೇಬಲ್ ಟಿವಿ ಮಾಲೀಕ ದಿನೇಶ್ ದುಬೆ ಎಂಬಾತನನ್ನೂ ಹತ್ಯೆ ಮಾಡಿದ್ದ. (ಏಜೆನ್ಸೀಸ್)