ಯೋಗ ದರ್ಶನದ ಏಳನೆಯ ಅಂಗ ಧ್ಯಾನ. ಮಹರ್ಷಿ ಪತಂಜಲಿ ಹೇಳುತ್ತಾರೆ. ‘ಧ್ಯಾನವೆಂದರೆ ಅದರ ಮೇಲೆ ಪ್ರತ್ಯಯವು ನಿರಂತರವಾಗಿ ಹರಿಯುವಿಕೆೆ’ ಎಂದು. ಪ್ರತ್ಯಯದ ನಿರಂತರವಾದ ಮತ್ತು ಏಕ ರೀತಿಯ ಪ್ರಭಾವ ಪ್ರವಾಹವು ಧ್ಯಾನ ಸಂಖ್ಯಾದರ್ಶನ ‘ಸರ್ವವಿಷಯರಹಿತವಾದ ಮನಸ್ಥಿತಿಯೇ ಧ್ಯಾನ’ ಎಂದಿದೆ. ಎಂದರೆ ಪಂಚ ಜ್ಞಾನೇಂದ್ರಿಯ ಅರ್ಥಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು. ಈ ಐದರ ಸಂಬಂಧವೂ ಇಲ್ಲದೆ, ಚಿತ್ತವು ನಿರಂತರವಾಗಿ ಸಗುಣ ಜ್ಞಾನದ ಸ್ಥಿತಿಯಲ್ಲಿರುವುದೇ ಧ್ಯಾನ. ಮಹರ್ಷಿ ವ್ಯಾಸರು-‘ಆ ದೇಶದಲ್ಲಿ ಧ್ಯೇಯವನ್ನವಲಂಬಿಸಿರುವ ಭಕ್ತಿ ಜ್ಞಾನವು ಏಕತಾನವಾಗಿರುವುದು, ಮುರಿಯದ ಪ್ರವಾಹದಂತಿರುವುದು. ಬೇರೆಯ ಜ್ಞಾನದಿಂದ ನಷ್ಟವಾಗದಿರುವುದು ಧ್ಯಾನ’ ಎಂದು ಹೇಳುತ್ತಾರೆ. ವಸ್ತುತಃ, ಆತ್ಮನಲ್ಲಿ ಪರಮಾತ್ಮನಲ್ಲಿ ಅಥವಾ ಅವರಿಬ್ಬರ ಗುಣಚಿಂತನದಲ್ಲಿ ಮನಸ್ಸು ಮಗ್ನವಾಗಿ ಬೇರೆ ವಿಷಯಗಳ ಜ್ಞಾನದಿಂದ ಭಂಗಪಡದೆ ಏಕಪ್ರಕಾರವಾದ ಜ್ಞಾನದಲ್ಲಿರುವುದೇ ಧ್ಯಾನ. ಈ ಸ್ಥಿತಿ ಅನುಭವಕ್ಕೆ ಬರಬೇಕಾದರೆ ಸಾಧಕರು ಬಹಳ ಪ್ರಯತ್ನ ಪಡಬೇಕಾಗುತ್ತದೆ. ಧಾರಣಾವಸ್ಥೆಯಲ್ಲಿ ಮನಸ್ಸು ಆಗಾಗ ಚಲಿಸಿ, ವಿಷಯಾಂತರಗತವಾಗಬಹುದು; ಆದರೆ ಧ್ಯಾನಾವಸ್ಥೆಯಲ್ಲಿ ಸ್ವರೂಪ ಜ್ಞಾನವನ್ನು ಕದಲಿಸುವ ಬೇರಾವ ಅಂತರಾಯ ಜ್ಞಾನವು ತಲೆಹಾಕುವುದಿಲ್ಲ. ಈ ಧ್ಯಾನಾವಸ್ಥೆಯಲ್ಲಿ ಬಾಹ್ಯ ವೃತ್ತಿಗಳು ಸರ್ವಥಾ ಲೀನವಾಗಿ, ಬಾಹ್ಯ ಜಗತ್ತಿಗೂ ಧ್ಯಾನಸ್ಥನಿಗೂ ಯಾವ ಸಂಬಂಧವೂ ಇರುವುದಿಲ್ಲ. ಧ್ಯಾನದ ಮೂಲಕ ಪ್ರತಿಬಿಂಬ ಸ್ವರೂಪದಲ್ಲಿ ಹಾಗೂ ಪರಮಾತ್ಮನ ಬಿಂಬ ಸ್ವರೂಪವನ್ನು ಕಂಡಾಗ ಮಾನವನಿಗೆ ತನ್ನ ನಿಜವಾದ ಸ್ವರೂಪ ಜ್ಞಾನದ ಪರಿಚಯವಾಗುತ್ತದೆ. ‘ಯಾವುದರಲ್ಲಿ ಚೆನ್ನಾಗಿ ಜ್ಞಾನ ಮಾಡುತ್ತಾರೋ ಅದೇ ಸಂಧ್ಯಾ’ ಎಂದು ಸಂಧ್ಯಾ ಶಬ್ದಕ್ಕೆ ಅರ್ಥವನ್ನೂ ಕೂಡ ಹೇಳಿದ್ದಾರೆ. ವಸ್ತುತಃ ಧ್ಯಾನವೆಂಬುದು ತನ್ನ ಅಂತಶಕ್ತಿಯನ್ನು ಅರಳಿಸುವ ಒಂದು ಸಾಧನ. ಅಂತಶಕ್ತಿಗಳ ವಿಕಾಸ ಈ ಲೋಕಕ್ಕೂ ಬೇಕು. ಧ್ಯಾನವು ಶಾಂತಿ ಸಾಧನೆಯ ಒಂದು ಹಂತ. ಅದಕ್ಕೂ ಮುಂದಿನ ಹಂತ ಬೇರೆಯೇ ಇದೆ. ಧ್ಯಾನವೇ ನಮ್ಮ ಗುರಿಯಲ್ಲ, ಅದು ಅದ್ಭುತ ಸಾಧನ ಮಾತ್ರ. ಅದನ್ನು ಸ್ವೀಕರಿಸಿದವರು ಸರ್ವಕರ್ಮ ಪರಿತ್ಯಾಗಿಗಳಾಗಬೇಕೆಂಬ ನಿಯಮಗಳೇನೂ ಇಲ್ಲ. ಧ್ಯಾನ ಮಾಡುವುದು ಆತ್ಮಶಕ್ತಿಯ ವಿಕಾಸ ಮತ್ತು ಪರಮಾತ್ಮ ಸಂಪರ್ಕಕ್ಕಾಗಿ; ಆತ್ಮನ ಉತ್ಕರ್ಷಕ್ಕಾಗಿ. ಆತ್ಮನ ಉತ್ಕರ್ಷ ಐಹಿಕವೂ ಅಹುದು. ಆಮುಷ್ಮಿಕವೂ ಹೌದು. ಈ ಲೋಕದಲ್ಲಿ ಅಭ್ಯುದಯ ಮತ್ತು ಸಫಲ ಜೀವನಾಂತರ ಮೋಕ್ಷ-ಇವೆರಡರ ಪ್ರಾಪ್ತಿಯೇ ಪೂರ್ಣ ಆತ್ಮೋಕ್ಕರ್ಷ.
ಭಗವದ್ಗೀತೆಯಲ್ಲಿ ಯೋಗಾಚಾರ್ಯ ಶ್ರೀ ಕೃಷ್ಣನು ‘ಅಜ್ಞಾನ ಪೂರ್ವಕವಾದ ಧ್ಯಾನದ ಅಭ್ಯಾಸಕ್ಕಿಂತಲೂ ಜ್ಞಾನವು ಶ್ರೇಷ್ಠವಾದದ್ದು. ಕೇವಲ ಜ್ಞಾನಕಿಂತ ಜ್ಞಾನಪೂರ್ವಕವಾದ ಧ್ಯಾನವು ಶ್ರೇಷ್ಠವು. ಜ್ಞಾನಪೂರ್ವಕವಾದ ಸಕಾಮ ಧ್ಯಾನಕ್ಕಿಂತ ಕರ್ಮಫಲ ತ್ಯಾಗ ಪೂರ್ವಕವಾದ ನಿಷ್ಕಾಮ ಧ್ಯಾನವು ಶ್ರೇಷ್ಠವು. ಕರ್ಮಫಲ ತ್ಯಾಗ ರೂಪವಾದ ನಿಷ್ಕಾಮ ಧ್ಯಾನದಿಂದ ಅಪರೋಕ್ಷ ಜ್ಞಾನ ಉಂಟಾಗಿ ಅನಂತರವೇ ಮೋಕ್ಷ ಪ್ರಾಪ್ತಿಯು’ ಎಂದಿದ್ದಾನೆ.
ಪರಮಾತ್ಮನ ಸಂಬಂಧವಾದ ಜ್ಞಾನವಿಲ್ಲದ ಬರಿಯ ಧ್ಯಾನ ಅಭ್ಯಾಸವು ಅಷ್ಟು ಪ್ರಯೋಜನಕಾರಿಯಲ್ಲ. ಈ ಕುರಿತು ಗೋಪಾಲದಾಸರ ವರ್ಣನೆ ಹೀಗಿದೆ:
‘ಮಂತ್ರ ಮಾಡಿದರೇನು ತಂತ್ರ ತೋರಿದರೇನು | ಎಂತೆಂತು ಕರ್ಮ ನಿರಂತರ ಮಾಡಲೇನು | ಚಿಂತನೆ ಹರಿ ಸ್ವತಂತ್ರ ಪರತಂತ್ರ | ಇಂತು ಜೀವೇಶರ ವಿವೇಕ ಸರಿಯರಾ | ನಂತು ಜನುಮಗಳು ಆ ಬಂದಿದ್ದರೂ | ಸಂತೋಷ ಕೊಡವು ಸಾಧನ ಕರ್ಮಗಳು | ದಂತಿ ಮಜ್ಜನ ಕಾಣೋ ಹರಿಯ ತಿಳಿಯದ ಕರ್ಮ ||
ಶ್ರೀಹರಿಯ ಸಂಬಂಧ ಜ್ಞಾನವಿಲ್ಲದ ಎಷ್ಟೇ ಧ್ಯಾನಾದಿ ಕರ್ಮಗಳನ್ನು ಅಭ್ಯಾಸಮಾಡಿದರೂ ಅದು ‘ದಂತಿಸ್ನಾನ’ ಎಂದರೆ ಆನೆ ದಿನವಿಡೀ ನೀರಿನಲ್ಲಿ ಮುಳುಗಿ ಸ್ನಾನಗೈದು ಮೇಲೆ ಬಂದಾಕ್ಷಣ ತನ್ನ ಸೊಂಡಿಲಿನಿಂದ ಧೂಳನ್ನು ಎರಚಿಕೊಂಡು ಮತ್ತೆ ಮೈಕೆಸರು ಮಾಡಿಕೊಳ್ಳುವಂತೆ ಜ್ಞಾನವಿಲ್ಲದ ಧ್ಯಾನಾದಿ ಅಭ್ಯಾಸಗಳು ವ್ಯರ್ಥವಾಗುತ್ತವೆ. ಜ್ಞಾನರಹಿತವಾದ ಅಭ್ಯಾಸವು ಧ್ಯಾನದಂತೆ ಕಂಡರೂ ಇದರಿಂದ ವಿಷಯದ ಗ್ರಂಥಿ ಛೇದನವಾಗುವುದಿಲ್ಲ. ಅಜ್ಞಾನದ ಸರಕು ಹೋಗುವುದಿಲ್ಲ. ಇದು ನಿಂತು ನಿದ್ರೆ ಮಾಡಿದ ಹಾಗೆ. ಯಾವಾಗ ಬಿದ್ದು ಹೋಗುತ್ತಾನೆಂದು ಹೇಳುವುದು ಸಾಧ್ಯವಾಗದು. ಉದರಂಭಣಕ್ಕಾಗಿ ಭಕ್ತಿ ಜ್ಞಾನ ರಹಿತವಾದ ಆಡಂಬರದ ಧ್ಯಾನಾಧಿ ಅಭ್ಯಾಸಗಳು ಜನರ ತೋರಿಕೆಗೆ ಸಹಾಯವಾದಿತೇ ಹೊರತು ಮೋಕ್ಷಸಾಧನವಾಗಲಾರದು.