ನ್ಯೂಸ್

ವಿಜಯವಾಣಿ ಸಂಪಾದಕೀಯ: ಹಣಕಾಸು ಸ್ಥಿತಿಗೆ ಮದ್ದು

ಕೆಳಮಧ್ಯಮವರ್ಗ, ಮಧ್ಯಮವರ್ಗದ ಕುಟುಂಬಗಳನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ಭಾರತ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವೇನಲ್ಲ. ಕೋಟ್ಯಂತರ ಕುಟುಂಬಗಳು ತಿಂಗಳ ಅಲ್ಪಪ್ರಮಾಣದ ಸಂಬಳವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ. ಹೀಗಿರುವಾಗ ದಿಢೀರನೆ ಎದುರಾಗುವ ಆಪತ್ತು, ಆರ್ಥಿಕ ಸಂಕಷ್ಟ ಇಂಥ ಕುಟುಂಬಗಳ ಸ್ಥಿತಿಯನ್ನು ಶೋಚನೀಯವಾಗಿಸುತ್ತದೆ. ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ತೊಲಗುವ ಮುನ್ನವೇ ಕರೊನಾ ಸೋಂಕಿನ ರೂಪದಲ್ಲಿ ಬಂದೆರಗಿರುವ ಆಪತ್ತು ಆರ್ಥಿಕ ರಂಗಕ್ಕೆ ಬಲವಾದ ಪೆಟ್ಟನ್ನೇ ಕೊಟ್ಟಿದೆ. ಈಗಂತೂ, ಇಡೀ ಭಾರತ ಮೂರು ವಾರಗಳ ದಿಗ್ಭಂಧನದಲ್ಲಿ ಇರುವುದರಿಂದ ಸಾಲ ಪಡೆದ ಜನಸಾಮಾನ್ಯರು ತಿಂಗಳ ಕಂತು ಕಟ್ಟುವುದು ಹೇಗೆ, ಹಣದ ಹರಿವು ಕಡಿಮೆ ಆಗಿರುವಾಗ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು. ಈ ಎಲ್ಲ ಕಳವಳಕ್ಕೆ ಒಂದಿಷ್ಟು ಪರಿಹಾರ ಮತ್ತು ಈಗಿನ ಆರ್ಥಿಕ ಸ್ಥಿತಿಗೆ ಮದ್ದರೆಯುವ ಪ್ರಯತ್ನಗಳನ್ನು ಆರ್​ಬಿಐ ಮಾಡಿದೆ.

ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಮತ್ತು ಬಡವರಿಗೆ, ದಿನಗೂಲಿಗಳಿಗೆ, ಸಂಘಟಿತ ವಲಯದ ಕಾರ್ವಿುಕರಿಗೆ ನೆರವು ಘೋಷಣೆ ಮಾಡಿದ ಒಂದು ದಿನದಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಘೋಷಣೆ ಮಾಡಿ, ಮಧ್ಯಮವರ್ಗದವರು ಕೊಂಚ ನಿರಾಳವಾಗುವಂತೆ ಮಾಡಿದೆ. ರೆಪೊ ದರ (ಆರ್​ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) 75 ಅಂಶ ಕಡಿತಗೊಳಿಸಿ ಶೇಕಡ 4.4ಕ್ಕೆ ನಿಗದಿ ಮಾಡಲಾಗಿದೆ. ರಿವರ್ಸ್ ರೆಪೊ ಶೇ.4ಕ್ಕೆ ತಗ್ಗಿಸಲಾಗಿದೆ. ರೆಪೊ ದರ ಕಡಿತಗೊಳಿಸಿರುವುದರಿಂದ ಎಲ್ಲ ಸಾಲಗಳು ಅಗ್ಗವಾಗಲಿದ್ದು, ಮಾಸಿಕ ಕಂತಿನ ಹೊರೆ ಕೊಂಚ ಕಡಿಮೆ ಆಗಲಿದೆ.

ಎಲ್ಲ ದೀರ್ಘಾವಧಿ ಸಾಲಗಳ ಪಾವತಿಗೆ ಮೂರು ತಿಂಗಳ ವಿನಾಯ್ತಿ ಘೋಷಿಸಲಾಗಿದೆ. ಪರಿಣಾಮ, ಸದ್ಯದ ಸಂಕಷ್ಟದ ಹೊತ್ತಲ್ಲಿ ಜನರ ಕೈಯಲ್ಲಿ ಒಂದಿಷ್ಟು ಹಣ ಉಳಿದುಕೊಂಡು, ಪರದಾಟ ತಪ್ಪಲಿದೆ. ನಗದು ಮೀಸಲು ಸರಾಸರಿಯಲ್ಲಿ (ಸಿಆರ್​ಆರ್) 100 ಮೂಲಾಂಶವನ್ನು ಕಡಿತ ಮಾಡಲಾಗಿದೆ. ಇದರಿಂದ ಆರ್​ಬಿಐನಲ್ಲಿ ಬ್ಯಾಂಕ್​ಗಳು ಇರಿಸಬೇಕಾದ ಕಡ್ಡಾಯ ಠೇವಣಿ ಮೊತ್ತ ತಗ್ಗಲಿದ್ದು, -ಠಿ;1.37 ಲಕ್ಷ ಕೋಟಿ ಮೊತ್ತ ವಾಣಿಜ್ಯ ಬ್ಯಾಂಕ್​ಗಳಿಗೆ ಮರುಸಂದಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಆರ್​ಬಿಐ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ್ದು, ಇವುಗಳಿಂದ ಹಣದ ಹರಿವು ಹೆಚ್ಚಲು ಸಹಾಯವಾಗಲಿದೆ ಎಂದಿದ್ದಾರೆ. ವಿತ್ತ ಸಚಿವರು ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ.

ಆರ್​ಬಿಐನ ಕ್ರಮಗಳು ಆರ್ಥಿಕ ವಲಯದಲ್ಲಿ ಒಂದಿಷ್ಟು ಭರವಸೆ ಮೂಡಿಸಲು ಪೂರಕವಾಗಿವೆ. ಆದರೆ, ಆರ್​ಬಿಐ, ಸರ್ಕಾರ ಮತ್ತು ಜನಸಾಮಾನ್ಯರು ಕೂಡ ಮುಂದಿನ ದಿನಗಳಿಗೆ ಸಜ್ಜಾಗಬೇಕಿದೆ. ಲಾಕ್​ಡೌನ್ ಅವಧಿ ಮುಗಿದ ಮೇಲಷ್ಟೇ, ಆರ್ಥಿಕ ಹಾನಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಆರ್ಥಿಕ ತಜ್ಞರು ಹೇಳುವ ಪ್ರಕಾರ ಮುಂದಿನ ದಿನಗಳು ಕಷ್ಟದಿಂದ ಕೂಡಿರಲಿವೆ. ಆದ್ದರಿಂದ, ವಿಶೇಷವಾಗಿ ಬಡವರು ಮತ್ತು ಕೆಳಮಧ್ಯಮವರ್ಗದವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಪೂರಕ ಕ್ರಮಗಳು ಪ್ರಕಟವಾಗಲಿ, ಜನಸಾಮಾನ್ಯರು ಕೂಡ ಅನವಶ್ಯಕ ಖರ್ಚುಗಳಿಗೆ ಸದ್ಯದ ಮಟ್ಟಿಗಾದರೂ ಕಡಿವಾಣ ಹಾಕಲಿ.